‘ಕಿರಾತಕ’ ಸಿನಿಮಾ ನಿರ್ದೇಶಕ ಕೊರೊನಾಗೆ ಬಲಿ

pradeep

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕಿರಾತಕ ಸಿನಿಮಾವನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ಪ್ರದೀಪ್‌ ರಾಜ್‌ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

ಕೊರೊನಾ ಬಂದ ಹಿನ್ನೆಲೆಯಲ್ಲಿ ಗುರುವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಪಾಂಡಿಚೇರಿಯಲ್ಲಿ ಪ್ರದೀಪ್ ರಾಜ್ ನಿಧನರಾಗಿದ್ದಾರೆ. ಅವರಿಗೆ 46 ವರ್ಷ ವಯಸ್ಸಾಗಿತ್ತು. ಪ್ರದೀಪ್ ರಾಜ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ

ಕಿರಾತಕ ಸಿನಿಮಾದ ನಿರ್ದೇಶಕರಾಗಿದ್ದ ಪ್ರದೀಪ್‌ ರಾಜ್‌  ಸುಮಾರು15 ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದರು. ಜೊತೆಗೆ ಇತ್ತೀಚೆಗೆ ಅವರಿಗೆ ಕೊರೊನಾ ಸೋಂಕು ಕೂಡ ತಗುಲಿತ್ತು. ಅದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಪ್ರದೀಪ್ ರಾಜ್ ಸಹೋದರ ಪ್ರಶಾಂತ್ ರಾಜ್ ಸ್ಪಷ್ಟೀಕರಣ ನೀಡಿದ್ದಾರೆ.

ಕಿರಾತಕ ಮಾತ್ರವಲ್ಲದೇ ನಂತರ  ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ‘ಮಿ. 420’, ದುನಿಯಾ ವಿಜಯ್‌ ಜೊತೆಗೆ ‘ರಜನಿ ಕಾಂತ’, ಸತೀಶ್ ನೀನಾಸಂ ಅವರೊಂದಿಗೆ ‘ಅಂಜದ ಗಂಡು’ ಮತ್ತು ‘ಬೆಂಗಳೂರು-23’, ಹಾಗೂ ‘ಕಿಚ್ಚು’ ಎಂಬ ಸಿನಿಮಾಗಳನ್ನು ಕೂಡ ಅವರು ನಿರ್ದೇಶನ ಮಾಡಿದ್ದರು. 

ಮೊದಲ ಚಿತ್ರವೇ ಹಿಟ್‌ :

ಪ್ರದೀಪ್‌ ರಾಜ್‌ ನಿರ್ದೇಶನದ ಮೊದಲ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ‘ಕಿರಾತಕ’ ದೊಡ್ಡ ಹಿಟ್ ಮಾಡಿತ್ತು, ಇದು ಪ್ರದೀಪ್ ಜೊತೆಗೆ ಯಶ್‌ ಕರಿಯರ್‌ಗೂ ಬ್ರೇಕ್ ನೀಡಿತು.. ರಾಜ್ಯದ 20 ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿದ ‘ಕಿರಾತಕ’, ಕೆಲ ಚಿತ್ರಮಂದಿರಗಳಲ್ಲಿ ಸೆಂಚುರಿ ಬಾರಿಸಿತು. ಆನಂತರ ಹೊಸಬರನ್ನು ಇಟ್ಟುಕೊಂಡು ‘ಕಿರಾತಕ 2’ ಮಾಡಲು ಪ್ರದೀಪ್ ರಾಜ್‌ ನಿರ್ಧರಿಸಿದರು. ಸಿನಿಮಾ ಇನ್ನೇನು ತೆರೆಗೆ ಬರಬೇಕು ಎನ್ನುವಷ್ಟರಲ್ಲಿ, ಅವರು ಇಹಲೋಕ ತ್ಯಜಿಸಿದ್ದಾರೆ.

Exit mobile version