ರಾಜಕಾರಣಿಗಳೇ ಡ್ರಗ್ಸ್ ಮಾಫಿಯಾ ರೂವಾರಿಗಳು: ಪ್ರಮೋದ್‍ ಮುತಾಲಿಕ್‍

ರಾಜಕಾರಣಿಗಳೇ ಡಗ್ಸ್ ಮಾಫಿಯಾದ ರೂವಾರಿಗಳಾಗಿದ್ದು, ಲವ್ ಜಿಹಾದ್‍ ಮಾದರಿಯಲ್ಲಿ ಡ್ರಗ್ಸ್ ಜಿಹಾದ್‍ ನಡೆಯುತ್ತಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ..


ಮೈಸೂರಿನಲ್ಲಿ ಮಾತನಾಡಿದ ಅವರು, ರಾಜಕಾರಣಿಗಳೇ ಡ್ರಗ್ಸ್ ದಂಧೆ ನಡೆಸುತ್ತಿದ್ದು, ಅವರ ಮಕ್ಕಳೇ ಇದರಲ್ಲಿ ಶಾಮೀಲು ಆಗಿದ್ದಾರೆ. ಸಾವಿರಾರು ಕೋಟಿ ದಂಧೆ ಮಾಡುತ್ತಿದ್ದು, ಪ್ರಕರಣ ಹೊರ ಬಂದಾಗ ಜಾಮೀನು ಪಡೆದು ಹೊರಗೆ ಬರುತ್ತಾರೆ. ಬಳಿಕ ಇದೇ ರೀತಿ ಡ್ರಗ್ಸ್ ದಂಧೆ ಮಾಡುತ್ತಾರೆ. ಈ ಡ್ರಗ್ಸ್ ಮಾಫಿಯಾ ಬಗ್ಗೆ ಪೊಲೀಸರಿಗೆ ಎಲ್ಲಾ ತಿಳಿದಿದ್ದರೂ, ರಾಜಕಾರಣಿಗಳೇ ಪೊಲೀಸರ ಕೈಕಟ್ಟಿ ಹಾಕಿದ್ದಾರೆ. ನನ್ನ ಬಳಿ 32 ರಾಜಕಾರಣಿಗಳ ಪಟ್ಟಿ ಇದ್ದು, ಅದನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.


ದೇಶದಲ್ಲಿ ಡ್ರಗ್ಸ್ ಜಿಹಾದ್:

ಲವ್ ಜಿಹಾದ್ ಮಾದರಿಯಲ್ಲಿ ಡ್ರಗ್ಸ್ ಜಿಹಾದ್ ನಡೆಯುತ್ತಿದ್ದು, ಇದು ದೇಶಾದ್ಯಂತ ವ್ಯಾಪಿಸಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇದರ ಮೂಲ ರೂವಾರಿ ಆಗಿದ್ದು, ಪಂಜಾಬ್, ಗುಜರಾತ್, ಗೋವಾ ಮೂಲಕ ಭಾರತಕ್ಕೆ ಡ್ರಗ್ಸ್ ಪ್ರವೇಶಿಸುತ್ತಿದೆ. ಇದರಲ್ಲಿ ರಾಜಕಾರಣಿಗಳು ಭಾಗಿಯಾಗಿದ್ದಾರೆ. ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷದವರು ಡ್ರಗ್ಸ್ ದಂಧೆಯಲ್ಲಿ ಶಾಮೀಲಾಗಿದ್ದಾರೆ. ಹೊಂದಾಣಿಕೆ ರಾಜಕಾರಣದ ಮೂಲಕ ಎಲ್ಲವನ್ನೂ ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲೇ ಈ ಬಗ್ಗೆ ಗಮನ ಸೆಳೆದಿದ್ದ ನನ್ನನ್ನೇ ಟಾರ್ಗೆಟ್ ಮಾಡಿದರು. ಆಗಲೇ ಇದನ್ನು ಮಟ್ಟ ಹಾಕಿದ್ದರೇ, ಇಂದು ಇಷ್ಟು ದೊಡ್ಡಮಟ್ಟಕ್ಕೆ ಬೆಳೆಯುತ್ತಿರಲಿಲ್ಲ ಎಂದರು.


ಮೈಸೂರಿನ ಕಾಲೇಜುಗಳಲ್ಲಿ ಡ್ರಗ್ಸ್:
ಹೊರ ದೇಶದ ವಿದ್ಯಾರ್ಥಿಗಳು ಲಕ್ಷಾಂತರ ರೂ. ಖರ್ಚು ಮಾಡಿಕೊಂಡು ಕಾಲೇಜು ಸೇರುತ್ತಾರೆ. ಮೈಸೂರಿನ ಪ್ರತಿಷ್ಠಿತ ಶಾಲಾ-ಕಾಲೇಜುಗಳಲ್ಲಿ ಡ್ರಗ್ಸ್ ಸಿಗಲಿದ್ದು, ಇದು ಪೋಷಕರು, ಪಾಲಕರು, ಶಿಕ್ಷಕರಿಗೆ ಗೊತ್ತಿದೆ. ಆದರೂ ಯಾರೊಬ್ಬರೂ ಈ ಬಗ್ಗೆ ಮಾತನಾಡುತ್ತಿಲ್ಲ ಎಂದರು.


ನಾನು ಚಾಲೆಂಜ್ ಮಾಡುತ್ತೇನೆ:

ಮೈಸೂರಿನ ಹಲವು ಹಾಸ್ಟೆಲ್‍ಗಳಲ್ಲಿ ಡ್ರಗ್ಸ್ ಮಾಫಿಯಾ ನಡೆಯಲಿದ್ದು, ಈಗಲೂ ಹಾಸ್ಟೆಲ್ಗಳ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸಿದರೆ ಡ್ರಗ್ಸ್, ಹೆರಾಯಿನ್ ಎಲ್ಲವೂ ಸಿಗುತ್ತವೆ. ಈ ಬಗ್ಗೆ ನಾನು ಚಾಲೆಂಜ್‍ ಮಾಡುತ್ತೇನೆ ಎಂದು ಸವಾಲು ಹಾಕಿದರು. ಈ ಡ್ರಗ್ಸ್ ದಂಧೆಯಿಂದ ಶಾಲಾ-ಕಾಲೇಜುಗಳಲ್ಲಿ ದೊಡ್ಡ ಅನಾವುತ ಆಗಲಿದೆ. ಹೀಗಾಗಿ ಮೊದಲು ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕಿದ್ದು, ಇಂದಿನಿಂದ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

Exit mobile version