ಹುಟ್ಟುವಾಗಲೇ ಗಿನ್ನಿಸ್‌ ರೆಕಾರ್ಡ್‌ ಮಾಡಿದ ಪೋರ

ವಾಷಿಂಗ್ಟನ್  ನ 13 : ಜನ್ಮತಃ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಿರುವ ಈತನ ಹೆಸರು ಕರ್ಟಿಸ್ ಜಿ ಕೀಥ್ ಮೀನ್ಸ್ ಅಂತ. ಈತ ಅವಧಿಪೂರ್ವ ಜೀವಂತ ಶಿಶುಗಳ ಪೈಕಿ ಜಗತ್ತಿನಲ್ಲೇ ಅತಿ ಕಿರಿಯವ. ಅಂದರೆ ಇವನು 21 ವಾರ ಒಂದು ದಿನಕ್ಕೆ ಅರ್ಥಾತ್ 148ನೇ ದಿನಕ್ಕೇ ಜನಿಸಿದ್ದಾನೆ. ತಿಂಗಳುಗಳ ಪ್ರಕಾರ 4.93 ತಿಂಗಳಿಗೆ ಹುಟ್ಟಿದ್ದಾನೆ.

2020ರ ಜುಲೈ 5ರಂದು ಜನಿಸಿದ್ದ ಈತನನ್ನು ಆಸ್ಪತ್ರೆಯಲ್ಲೇ ಇರಿಸಿಕೊಳ್ಳಲಾಗಿದ್ದು, ಈ ವರ್ಷದ ಏಪ್ರಿಲ್‌ನಲ್ಲಿ ಮನೆಗೆ ಕಳುಹಿಸಿಕೊಡಲಾಗಿದೆ. ಅಮೆರಿಕದ ಅಲಬಾಮದಲ್ಲಿ ಜನಿಸಿರುವ ಈತ ಹುಟ್ಟುವಾಗ ಇದ್ದ ತೂಕ ಬರೀ 420 ಗ್ರಾಮ್. ಈತನ ಹೃದಯ ಹಾಗೂ ಶ್ವಾಸಕೋಶಕ್ಕೆ ಹೊರಗಿನಿಂದ ಉಪಕರಣ ಅಳವಡಿಸಿ ಉಸಿರಾಟ ಸ್ಥಗಿತಗೊಳ್ಳದಂತೆ ಚಿಕಿತ್ಸೆ ನೀಡಲಾಗಿತ್ತು.

ಈತನ ತಾಯಿ ಮಿಷೆಲ್ಲೆ ಶೆಲ್ಲಿ ಬಟ್ಲರ್ 2020ರ ಜುಲೈ 4ರಂದು ಹೆರಿಗೆ ನೋವಿಗೆ ಒಳಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಆಕೆಯನ್ನು ಬರ್ಮಿಂಗ್ ಹ್ಯಾಮ್‌ನ ಯುನಿವರ್ಸಿಟಿ ಆಫ್ ಅಲಬಾಮ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಲೆಕ್ಕಾಚಾರದ ಪ್ರಕಾರ ಆತ ನ. 11ರಂದು ಜನಿಸಬೇಕಿತ್ತು.

Exit mobile version