ಇಂದು ರಾಷ್ಟ್ರಪತಿ ಮಂಗಳೂರಿಗೆ ಆಗಮನ

ಮಂಗಳೂರು ಅ.6: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೂರು ದಿನಗಳ ಕರ್ನಾಟಕ ಪ್ರವಾಸಕ್ಕೆ ಆಗಮಿಸಿದ್ದಾರೆ. ನಿನ್ನೆ ಸಂಜೆ ವಾಯುಪಡೆ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿರುವ ಕೋವಿಂದ್ ಇಂದು ಮೈಸೂರಿಗೆ ತೆರಳಲಿದ್ದಾರೆ.

ಮಧ್ಯಾಹ್ನ 12.30ಕ್ಕೆ ಮೈಸೂರಿನಲ್ಲಿ ಬಿಳಿಗಿರಿ ರಂಗನಸ್ವಾಮಿ ದೇವಸ್ಥಾನಕ್ಕೆ ತೆರಳಿ, ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆ ಬಳಿಕ 3.30ಕ್ಕೆ ಚಾಮರಾಜನಗರಕ್ಕೆ ಹೆಲಿಕಾಪ್ಟರ್ ನಲ್ಲಿ ತೆರಳಲಿದ್ದು  450 ಬೆಡ್ ಸಾಮರ್ಥ್ಯದ ಸರಕಾರಿ ಆಸ್ಪತ್ರೆ, ಕಟ್ಟಡದ ಉದ್ಘಾಟನೆ ನೆರವೇರಿಸಲಿದ್ದಾರೆ.

ಬಳಿಕ ಸಂಜೆ 5.15 ಕ್ಕೆ ವಾಯುಪಡೆ ವಿಮಾನದಲ್ಲಿ ಮೈಸೂರಿನಿಂದ ಮಂಗಳೂರಿಗೆ ಆಗಮಿಸಲಿದ್ದು 6.30 ಕ್ಕೆ ಮಂಗಳೂರು ನಗರ ತಲುಪಲಿದ್ದಾರೆ. ಕದ್ರಿಯ ಸರ್ಕಿಟ್ ಹೌಸ್ ಅಥವಾ ಓಶನ್ ಪರ್ಲ್ ಹೊಟೇಲ್ ನಲ್ಲಿ ವಾಸ್ತವ್ಯ ಹೂಡುವುದಕ್ಕೆ ಎರಡೂ ಕಡೆಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ನಾಳೆ ಬೆಳಗ್ಗೆ 10.30 ಕ್ಕೆ ವಾಯುಪಡೆ ಹೆಲಿಕಾಪ್ಟರ್ ನಲ್ಲಿ ಮಂಗಳೂರು ವಿಮಾನ ನಿಲ್ದಾಣದಿಂದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತೆರಳಲಿದ್ದಾರೆ. 12 ಗಂಟೆಗೆ ಶೃಂಗೇರಿಗೆ ತಲುಪಲಿದ್ದು ಅಲ್ಲಿ ಶೃಂಗೇರಿ ಶಾರದಾ ಪೀಠ ಮತ್ತು ಶಂಕರ ಅದೈತ ಶೋಧ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ದೇವರ ದರ್ಶನ ನಡೆಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ, ಶೃಂಗೇರಿ ಶಾರದಾ ಪೀಠದ ಭಾರತೀ ತೀರ್ಥ ಸ್ವಾಮೀಜಿ ಅವರನ್ನು ರಾಷ್ಟ್ರಪತಿ ಭೇಟಿಯಾಗಲಿದ್ದಾರೆ.

ಸಂಜೆ ನಾಲ್ಕು ಗಂಟೆಗೆ ಶೃಂಗೇರಿಯಿಂದ ಹೆಲಿಕಾಪ್ಟರ್‌ ಮೂಲಕ ಮರಳಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, 5:10ಕ್ಕೆ ವಾಯುಪಡೆ ವಿಶೇಷ ವಿಮಾನದಲ್ಲಿ ರಾಜಧಾನಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

Exit mobile version