ವಾರಾಣಸಿಯಲ್ಲಿ ಪ್ರಧಾನಿ ಮೋದಿಯಿಂದ 1,500 ಕೋಟಿ ಮೊತ್ತ ವಿವಿಧ ಅಭಿವೃದ್ಧಿ ಯೋಜನೆ ಉದ್ಘಾಟನೆ, ಶಂಕುಸ್ಥಾಪನೆ

ವಾರಾಣಸಿ, ಜು. 15: ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿನ ಐಐಟಿ– ಬಿಎಚ್ಯು ಮೈದಾನದಲ್ಲಿ ₹ 1,500 ಕೋಟಿ ಮೊತ್ತ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಮತ್ತು ಕೆಲವು ನೂತನ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ತಮ್ಮ ಲೋಕಸಭಾ ಕ್ಷೇತ್ರವಾದ ವಾರಾಣಸಿಗೆ ಆಗಮಿಸಿದ ಅವರು, ಬಿಎಚ್‌ಯುನಲ್ಲಿ 100 ಹಾಸಿಗೆಗಳ ವಿಭಾಗ, ಗೋದೌಲಿಯಲ್ಲಿ ಬಹುಮಹಡಿ ಪಾರ್ಕಿಂಗ್‌ ತಾಣ ಉದ್ಘಾಟಿಸಿದರು. ಪ್ರವಾಸೋದ್ಯಮ ಅಭಿವೃದ್ಧಿಯ ಭಾಗವಾಗಿ ಗಂಗಾನದಿಯಲ್ಲಿ ರೋರೋ ದೋಣಿಗಳಿಗೆ ಚಾಲನೆ ನೀಡಿದರು. ನಂತರ ವಾರಾಣಸಿ ನಗರದಲ್ಲಿ ಗಾಜಿಯಾಪುರ ಹೆದ್ದಾರಿ ಸಂಪರ್ಕಿಸುವ ತ್ರಿಪಥ ಮೇಲು ಸೇತುವೆಯನ್ನು ಉದ್ಘಾಟಿಸಿದರು.

ಈ ಮೂಲಕ ಪ್ರಧಾನಿಯವರು ಸುಮಾರು ₹ 744 ಕೋಟಿ ಮೊತ್ತದ ಯೋಜನೆಗಳನ್ನು ಉದ್ಘಾಟಿಸಿ, ₹ 839 ಕೋಟಿ ಮೌಲ್ಯದ ಹಲವು ಲೋಕೋಪಯೋಗಿ ಇಲಾಖೆಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಈ ಕಾರ್ಯಕ್ರಮಗಳ ನಂತರ ನರೇಂದ್ರ ಮೋದಿಯವರು ಜಪಾನ್‌ ಸರ್ಕಾರದ ನೆರವಿನಿಂದ ನಿರ್ಮಾಣ ಮಾಡಿರುವ ಅಂತರರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರ, ’ರುದ್ರಾಕ್ಷ’ವನ್ನು ಉದ್ಘಾಟಿಸಲಿದ್ದಾರೆ. ನಂತರ ಬಿಎಚ್‌ಯುನಲ್ಲಿರುವ ಬಾಣಂತಿಯರು ಮತ್ತು ಮಕ್ಕಳ ಆರೋಗ್ಯ ವಿಭಾಗವನ್ನು ಪರಿಶೀಲಿಸಲಿದ್ದಾರೆ. ’ಕೋವಿಡ್‌ –19’ ಮೂರನೇ ಅಲೆ ಎದುರಿಸಲು ಕೈಗೊಂಡಿರುವ ಸಿದ್ಧತೆಯ ಪರಿಶೀಲನೆ ಕುರಿತು ಅಧಿಕಾರಿಗಳು ಮತ್ತು ವೈದ್ಯಕೀಯ ವಿಭಾಗದ ಪ್ರಮುಖರೊಂದಿಗೆ ಸಭೆ ನಡೆಸಲಿದ್ದಾರೆ.

Exit mobile version