ನಮ್ಮಲ್ಲೂ ಹೆಚ್ಚುತ್ತಿವೆ, “ಹುಚ್ಚು ಪೊದೆಗಳು”

Prosopis juliflora

ಮೊನ್ನೆ ಶನಿವಾರ ಹೆದ್ದಾರಿಗುಂಟ ಚಾಮರಾಜನಗರದಿಂದ ಯಳಂದೂರು ಕಡೆ ಬರುತ್ತಿದ್ದೆ. ರಸ್ತೆಯ ಎರಡೂ ಕಡೆ ಈ ಬಳ್ಳಾರಿ ಜಾಲಿಯೇ ಚಾಮರ ಬೀಸುತ್ತಿದ್ದಂತೆ ಕಾಣುತ್ತಿತ್ತು.

ಇದು ಒಮ್ಮೆ ಕೇಡಿನ, ಬರಗಾಲದ ಸಂಕೇತದಂತೆ ಕಾಣುತ್ತಿತ್ತು. ನಿಸರ್ಗದ ಗೆಲುವಿನ ಹಸುರು ಬಾವುಟದಂತೆಯೂ ಕಾಣುತ್ತಿತ್ತು.

ಹಿಂದೊಂದು ಕಾಲದಲ್ಲಿ ಸಾಲು ಸಾಲು ಇಪ್ಪೆ ಮರಗಳಿದ್ದ ರಸ್ತೆ ಇದಾಗಿತ್ತು. ಈಗ ನೆರಳು ಇಲ್ಲವಾಗಿದೆ, ನೆಲ ಬರಡಾಗಿದೆ, ಅನಾಥವಾಗಿದೆ. ಅದನ್ನು ಇನ್ನಷ್ಟು ಒಣಗಿಸಲಾರೆ ಎಂದುಕೊಂಡು ನಿಸರ್ಗವೇ ಈ ಬಳ್ಳಾರಿ ಜಾಲಿಯನ್ನು ಹಾಸಿ ಹೊದೆಸುತ್ತಿದೆ.

ಈ ಮುಳ್ಳುಪೊದೆಯ ಕತೆ ಚೆನ್ನಾಗಿದೆ. ಬ್ರಿಟಿಷರ ಕಾಲದಲ್ಲಿ ಇದು ನಮ್ಮಲ್ಲಿಗೆ ಬಂದು ದೇಶವನ್ನೆಲ್ಲ ಆಕ್ರಮಿಸಿ ಈಗ ನಮ್ಮದೇ ಆಗಿರುವ ಪೊದೆ. ಏನಾಯ್ತು ಅಂದರೆ, ಜೋಧಪುರದ ಮಹಾರಾಜನ ಕೋಟೆ ಬಹಳ ಚಂದ ಇತ್ತು. ಅದು “ಯಕ್ಷರು, ಕಿನ್ನರರು ಮತ್ತು ದೈತ್ಯರು ಸೇರಿ ನಿರ್ಮಿಸಿದ ಕೃತಿ” ಎಂದು ಕವಿ ರುಡ್ಯಾರ್ಡ್ ಕಿಪ್ಲಿಂಗ್ ಕೂಡ ವರ್ಣಿಸಿದ್ದ. ಆದರೇನು, ಕೋಟೆಯ ಸುತ್ತ ಬರೀ ಭಣಭಣ ಬಂಡೆಗಳೇ ಕಾಣುತ್ತಿದ್ದವು. ಇದಕ್ಕೆಲ್ಲ ಹಸುರು ಉಡುಗೆ ತೊಡಿಸಬೇಕೆಂದು ಮಹಾರಾಜನಿಗೆ ಯಾರೋ ಬ್ರೇನ್ ವಾಷ್ ಮಾಡಿದರು. ಬ್ರಿಟಿಷರು ದಕ್ಷಿಣ ಅಮೆರಿಕದಿಂದ ತರಿಸಿದ್ದ ಈ ಮುಳ್ಳು ಜಾಲಿಯ ಬೀಜಗಳನ್ನು ಮಹಾರಾಜನೇ ಚೀಲದಲ್ಲಿ ತುಂಬಿಸಿಕೊಂಡು ಸ್ವತಃ ತನ್ನ ಪುಟ್ಟ ವಿಮಾನವನ್ನು ಏರಿ ಆಕಾಶದಿಂದ ಬಿತ್ತನೆ ಮಾಡಿದ.

ಅದು ಪಾರ್ಥೇನಿಯಂನಂತೆ, ಲಂಟಾನಾದಂತೆ, ಕೊರೊನಾದಂತೆ ಎಲ್ಲೆಡೆ ಹಬ್ಬಿತು. ರಾಜಸ್ತಾನ, ಗುಜರಾತ, ಮಧ್ಯಪ್ರದೇಶ, ಮಹಾರಾಷ್ಟ್ರಗಳ ಮೂಲಕ ನಮ್ಮ ಉತ್ತರದ ಜಿಲ್ಲೆಗಳಿಗೂ ಬಂತು. ಬಂತು ಎಂದರೇನು, ದಾಳಿ ಇಕ್ಕಿತು. ಸ್ಥಳೀಯ ಸಸ್ಯಗಳನ್ನೆಲ್ಲ ಹೊಸಕಿ ಹಾಕಿ, ತಾನೇ ದೊರೆ ಎಂಬಂತೆ ನೆಲಕ್ಕೆ ಛತ್ರಿ ಬಿಡಿಸಿ ನಿಂತಿತು. ಬಳ್ಳಾರಿಯನ್ನೂ ದಾಟಿ ಚಿತ್ರದುರ್ಗಕ್ಕೆ ಇದು ಬಂದಿದ್ದರಿಂದ ಯಾರೋ ಇದನ್ನು “ಬಳ್ಳಾರಿ ಜಾಲಿ” ಎಂದು ಕರೆದರು. ರಾಜಸ್ತಾನ ಹಳ್ಳಿಯ ಜನರು ಇದನ್ನು “ಹುಚ್ಚು ಪೊದೆ” (ಬಾವಲಿಯಾ) ಎಂದೇ ಕರೆಯುತ್ತಾರೆ. ಏಕೆಂದರೆ ಇದಕ್ಕೆ ನೀರು, ಗೊಬ್ಬರ, ರಕ್ಷಣೆ ಏನೇನೂ ಬೇಡ.

ಅಲ್ಲಿನ ಬೋಳು ಬಂಡೆಗಳ ಬಿರುಕಿನಲ್ಲೂ ಇದರ ಬೀಜಗಳು ಮೊಳೆತು ಚಿಗಿದು ನಿಲ್ಲುತ್ತದೆ. ಸ್ಥಳೀಯ ಸಸ್ಯಗಳನ್ನೆಲ್ಲ ಹೊಸಕಿ ಹಾಕಿದಾಗ ಜನ ಜಾನುವಾರುಗಳು ಬೇರೆ ಗತಿ ಇಲ್ಲದೆ ಇದನ್ನೇ ಅವಲಂಬಿಸಿದವು. ಒಂಟೆಗಳು ಹೇಗೋ ಇದರ ಮುಳ್ಳುಗಳನ್ನೂ ಜಗಿದು ನುಂಗಲು ಕಲಿತವು. ಪಕ್ಷಿಗಳು, ಹಾವು, ಹಲ್ಲಿ, ಜೇಡಗಳೂ ಜಾಲಿಯ ಮುಳ್ಳುಕೊಂಬೆಗಳಲ್ಲಿ ಬದುಕು ಕಟ್ಟಿಕೊಳ್ಳತೊಡಗಿದವು. ತೀರ ಕಷ್ಟದ ದಿನಗಳಲ್ಲಿ ಜನರೂ ಇದರ ಬೀಜವನ್ನು ಕುಟ್ಟಿ ಹಿಟ್ಟು ಮಾಡಿ ರೊಟ್ಟಿಯನ್ನೂ ತಟ್ಟಲು ಕಲಿತರು. ಅದಕ್ಕೆ ಇದರದ್ದೇ ಸೊಪ್ಪಿನ ಸಾರನ್ನೂ ಸೇರಿಸಿ ಸೇವಿಸಲು ಕಲಿತರು. 

ಕಷ್ಟಪಟ್ಟು ಇದರ ಕೊಂಬೆಯನ್ನು ಕತ್ತರಿಸಿ, ಇದ್ದಿಲು ಮಾಡಿ ಮಾರಿ ನಾಲ್ಕು ಕಾಸು ಮಾಡುವುದನ್ನೂ ಕಲಿತರು. ನೋಡಲು ಇದು ನಾಚಿಕೆ ಮುಳ್ಳಿನ ದೊಡ್ಡಣ್ಣನಂತೇ ಕಾಣುತ್ತದೆ. ಅಂಥದ್ದೇ ಎಲೆ, ಅಂಥದ್ದೇ ಮುಳ್ಳು, ಅಂಥದ್ದೇ ಹೂವು, ಅಂಥದ್ದೇ ಸೋಡಿಗೆ. ಗಾತ್ರ ದೊಡ್ಡದು ಅಷ್ಟೆ. ನಾಚಿಕೆಯಂತೂ ಇಲ್ಲವೇ ಇಲ್ಲ. ಮುಟ್ಟಿದರೆ ಮುನಿಯುವುದೂ ಇಲ್ಲ. ಕಡಿದರೆ ಚಿಗುರುತ್ತದೆ. ಸುಟ್ಟರೆ ಉತ್ತಮ ಇದ್ದಿಲು. ಈ ಹುಚ್ಚು ಸಸ್ಯದ ಹುಟ್ಟಡಗಿಸುತ್ತೇನೆ ಎಂದು ಒಬ್ಬ ಹುಚ್ಚು ಕನಸಿನ ಹೈದ ಬಂದ. ಜೋಧಪುರದ ಅದೇ ಕೋಟೆಯ ಸುತ್ತಲಿನ ಎಪ್ಪತ್ತು ಎಕರೆ ಭೂಮಿಯಲ್ಲಿ ಮುಂಚೆ ಇದ್ದ ಸಸ್ಯಗಳನ್ನೇ ಮತ್ತೆ ಬೆಳೆಸುತ್ತೇನೆ ಎಂದು ಟೊಂಕ ಕಟ್ಟಿದ.

ಆತನ ಹೆಸರು ಪ್ರದೀಪ್ ಕೃಷೆನ್, ಫಿಲ್ಮ್ ಮೇಕರ್ ಕೂಡ. ಈತನನ್ನು ಆಧುನಿಕ ಚಾಣಕ್ಯ ಎನ್ನಬಹುದು. ಈತ ಸಸ್ಯದ ಕೊಂಬೆಯನ್ನು ತರಿದು, ಕಾಂಡವನ್ನು ಕತ್ತರಿಸಿ, ಬೇರನ್ನೂ ಸುಟ್ಟ. ಆದರೆ ಜಾಲಿಸಸ್ಯ ಜಪ್ಪೆನ್ನಲಿಲ್ಲ. ಬೇರಿನ ತಳದಿಂದ ಹೊಸ ಪೊದೆ ಚಿಗುರುತ್ತಿತ್ತು. ಡ್ರಿಲ್ಲಿಂಗ್ ಯಂತ್ರವನ್ನು ತರಿಸಿ, ಬೇರನ್ನು ಕಿತ್ತು, ಕಳೆನಾಶಕ ಕೆಮಿಕಲ್ ಸುರಿದು, ಡೈನಮೈಟ್ ಸ್ಪೋಟಿಸಿ ಸುಟ್ಟರೂ ಮತ್ತೆ ಚಿಗುರುತ್ತಿತ್ತು. ಕೊನೆಗೆ ಕಲ್ಲು ಕುಟಿಗರನ್ನು ಕರೆಸಿದ. ಅವರು ನೆಲಕ್ಕೆ ಕಿವಿಕೊಟ್ಟು, ಬಂಡೆಯ ಬಿರುಕುಗಳನ್ನು ಪತ್ತೆ ಹಚ್ಚಿ, ಚಾಣದಿಂದ ಬಿರುಕುಗಳನ್ನು ದೊಡ್ಡದು ಮಾಡಿ, (ಸಮಸ್ಯೆಯ ಬೇರು ಮೂಲವನ್ನೇ ಪತ್ತೆ ಮಾಡಿ) ಸುಟ್ಟರು. 

ಈ ಸಸ್ಯ ಮತ್ತೆ ಚಿಗುರದಂತೆ ಮಾಡಿದರೆ ಸಾಲದು. ಅಲ್ಲಿ ಹಿಂದೆ ಬೆಳೆಯುತ್ತಿದ್ದ ಲೋಕಲ್ ಪೊದೆಗಳನ್ನು ಮತ್ತೆ ಬೆಳೆಸಬೇಕಲ್ಲ? ವರ್ಷಕ್ಕೆ ಬರೀ ಹದಿನೈದು ಮಿ.ಮೀ ಮಳೆ ಬೀಳುವ ಅಲ್ಲಿ (ಚಾಮರಾಜನಗರದಲ್ಲಿ ಅದರ ಅರವತ್ತು ಪಟ್ಟು ಜಾಸ್ತಿ ಮಳೆ ಬೀಳುತ್ತದೆ) ಟ್ಯಾಂಕರ್ ನೀರಿನ ಸಹಾಯವೂ ಇಲ್ಲದೇ ತಾನಾಗಿ ಬೆಳೆಯಬಲ್ಲ ಸಸ್ಯಗಳನ್ನು ಊರಿನ ಹಿರಿಯಜ್ಜಂದಿರ ನೆರವಿನಿಂದ ಪತ್ತೆ ಹಚ್ಚಿ ಪ್ರದೀಪ್ ತಂದು ಪೋಷಣೆ ಮಾಡಿ ಆರೆಂಟು ವರ್ಷಗಳ ನಂತರ ಅಲ್ಲಿ ಈಗ ಸ್ಥಳೀಯ ಹಸಿರು ಚಿಗುರಿ ಉದ್ಯಾನವಾಗಿದೆ.

ಹಾಗೆಂದು 2014ರಲ್ಲಿ ಬಿಬಿಸಿ ವಾರ್ತಾಸಂಸ್ಥೆ ಚಿತ್ರ ಸಮೇತ ವರದಿ ಮಾಡಿತ್ತು.[ಅಂದಹಾಗೆ ಪ್ರದೀಪ್ ಕೃಷೆನ್ ಯಾರು ಗೊತ್ತೆ? ಹೆಸರಾಂತ ಲೇಖಕಿ ಅರುಂಧತಿ ರಾಯ್ ಅವರ ಗಂಡ. ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ, ಉದ್ಯಾನಪಟು. ದಿಲ್ಲಿಯಲ್ಲಿ ಸೆಂಟ್ರಲ್ ವಿಸ್ತಾ ಬೇಡವೆಂದು ದಾವೆ ಹೂಡಿ, ಅದೇ ವೇಳೆಗೇ ಅದೇ ಯೋಜನೆಯ ಗಾರ್ಡನಿಂಗ ಸಲಹಾಕಾರ. “ನಾನು ಈಗಲೂ ಸೆಂಟ್ರಲ್ ವಿಸ್ತಾ ವಿರೋಧಿಯೇ. ಆದರೆ ಕಟ್ಟಡ ಬಂದೇ ಬರುತ್ತದೆ ಎಂದಾದಾಗ ಅದರ ಸುತ್ತಲಿನ ಪರಿಸರವನ್ನು ಚಂದ ಮಾಡೋಣ” ಎಂದು ಹೊರಟವರು. ಸೆಂಟ್ರಲ್ ವಿಸ್ತಾರವನ್ನು ಈಗಲೂ ವಿರೋಧಿಸುವವರು].ಬಳ್ಳಾರಿ ಜಾಲಿ (Prosopis juliflora) ಇಡೀ ದೇಶವನ್ನು ಆಕ್ರಮಿಸಿದೆ.

ಅಂದಹಾಗೆ ಅದು ನಮ್ಮ ದೇಶದ ವೈರಿಯೆ? ಮಿತ್ರನೆ? ಈ ಪ್ರಶ್ನೆಯನ್ನೇ ನಾವು ಲಂಟಾನಾ ಕಳೆಪೊದೆಗಳ ಬಗೆಗೂ ಹೇಳಬಹುದು. ಇದೇ ಚಾಮರಾಜನಗರದ ಬಿಳಿಗಿರಿ ರಂಗನ ಬೆಟ್ಟಶ್ರೇಣಿಯ ಕಾಡಿನಲ್ಲಿ ಲಂಟಾನಾ ಹಾವಳಿ ವಿಪರೀತವಾಗಿದೆ. ಕಾಡಿನ ಮೃಗಗಳಿಗೆ ಮೇವೂ ಇಲ್ಲದಂತೆ, ಓಡಾಡಲು ಜಾಗವೂ ಇಲ್ಲದಂತೆ ಆಕ್ರಮಿಸಿದೆ. ಅಲ್ಲಿನ ಸೋಲಿಗ ಶ್ರಮಜೀವಿಗಳ ಸಹಾಯ ಪಡೆದು ಅರಣ್ಯ ಇಲಾಖೆ ಒಂದೊಂದೇ ಲಂಟಾನಾ ಪೊದೆಯನ್ನು ಬೇರು ಸಮೇತ ಕಿತ್ತು ಹಾಕಿಸುತ್ತಿದೆ. ಬೆಟ್ಟಗಳ ಕಾಡಿನಲ್ಲಿ ಲಂಟಾನಾ ಅಲ್ಲಲ್ಲಿ ಕೆಲಮಟ್ಟಿಗೆ ಸೋಲುತ್ತಿರಬಹುದು. ಆದರೆ ಅದೇ ಜಿಲ್ಲೆಯ ಬಯಲು ನೆಲದಲ್ಲಿ ಮುಳ್ಳುಜಾಲಿ ಆಕ್ರಮಿಸುತ್ತಿದೆ.

ಅದು ವೈರಿಯೆ, ಮಿತ್ರನೆ? ಸ್ಥಳೀಯ ಸಸ್ಯಗಳನ್ನು ಹೊಸಕಿ ಹಾಕಿ ಈ ಆಕ್ರಮಣಕಾರಿ ಸಸ್ಯಗಳು ಬೆಳೆಯುತ್ತಿವೆಯೆ? ಅಥವಾ ಸ್ಥಳೀಯ ಸಸ್ಯಗಳನ್ನು/ವೃಕ್ಷಗಳನ್ನು ನಾವಾಗಿ ಹೊಸಕಿ ಹಾಕಿದ್ದರಿಂದಲೇ ಈ ವಿದೇಶೀ ಸಸ್ಯಗಳು ಬಂದು ತಳವೂರಿ ನೆಲದ ರಕ್ಷಣೆ ಮಾಡುತ್ತಿವೆಯೆ? ಅವು ನಮ್ಮೊಂದಿಗೆ ಸಹಬಾಳ್ವೆ ನಡೆಸುತ್ತಿವೆಯೆ, ಅಥವಾ ನಾವು ಅವುಗಳೊಂದಿಗೆ ಬದುಕಲು ಕಲಿತಿದ್ದೇವೆಯೆ?ಈ ಪ್ರಶ್ನೆಯನ್ನೇ ನಮ್ಮ ಈ ಭರತಖಂಡದ ಮೇಲೆ ದಾಳಿಗೆ ಬಂದ ಎಲ್ಲ ಬಗೆಯ ಜೀವಿಗಳ ಕುರಿತೂ ಕೇಳಬಹುದು. ಅಥವಾ ಕೇಳಬಾರದೆ?

Source : ಪರಿಸರ ಪರಿವಾರ

Exit mobile version