ಪುಣೆ ಕೆಮಿಕಲ್ ಫ್ಯಾಕ್ಟರಿ ದುರಂತ; ಸಾವಿನ ಸಂಖ್ಯೆ 18ಕ್ಕೆ ಏರಿಕೆ

ಮುಂಬೈ, ಜೂ. 08: ಸೋಮವಾರ ಮಹಾರಾಷ್ಟ್ರದ ಪುಣೆಯ ಕೆಮಿಕಲ್​ ಫ್ಯಾಕ್ಟರಿಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಮೃತರಲ್ಲಿ 15 ಜನ ಮಹಿಳೆಯರೇ ಆಗಿದ್ದಾರೆ. ಈ ಅಗ್ನಿ ದುರಂತ ಸಂಭವಿಸಿದ ಬಳಿಕ ಇನ್ನೂ ಹಲವರು ಕಣ್ಮರೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎಸ್​​ವಿಎಸ್​​ ಆಕ್ವಾ ಟೆಕ್ನಾಲಜೀಸ್​ನ ಘಟಕದಲ್ಲಿ(ಪ್ಲಾಂಟ್​) ಈ ದುರಂತ ನಡೆದಿದೆ. ನಿನ್ನೆ ಪುಣೆಯ ರಾಸಾಯನಿಕ ಮತ್ತು ಸ್ಯಾನಿಸಟೈಸರ್​ ಉತ್ಪಾದನಾ ಘಟಕದಲ್ಲಿ ಈ ಅವಘಡ ಸಂಭವಿಸಿತ್ತು. ಆಗ 12 ಮಂದಿ ಸಾವನ್ನಪ್ಪಿದ್ದರು. ಈಗ ಸಾವಿನ ಸಂಖ್ಯೆ ಏರಿಯಾಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 18 ಆಗಿದೆ.

ಪ್ರಧಾನಿ ನರೇಂದ್ರ ಮೋದಿ ಈ ಅವಘಡದಲ್ಲಿ ಸಾವನ್ನಪ್ಪಿದ ಕಾರ್ಮಿಕರಿಗೆ ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ಮಹಾರಾಷ್ಟ್ರದ ಪುಣೆಯ ಫ್ಯಾಕ್ಟರಿಯಲ್ಲಿ ಬೆಂಕಿ ದುರಂತದಿಂದಾಗಿ ಹಲವು ಜೀವಗಳನ್ನು ಕಳೆದುಕೊಂಡಿರುವುದು ತೀವ್ರ ದು:ಖ ತರಿಸಿದೆ. ಘಟನೆಯಲ್ಲಿ ಸಾವನ್ನಪ್ಪಿದ ಕಾರ್ಮಿಕರಿಗೆ ನನ್ನ ಸಂತಾಪಗಳು ಎಂದಿದ್ದಾರೆ.

ದುರಂತ ನಡೆದ ಎಸ್​ವಿಎಸ್​ ಆಕ್ವಾ ಟೆಕ್ನಾಲಜಿಸ್​ ಘಟಕಕ್ಕೆ ಸುಮಾರು 6 ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಬೆಂಕಿ ದುರಂತ ಸಂಭವಿಸಿದಾಗ ಸುಮಾರು 37 ಸಿಬ್ಬಂದಿ ಘಟಕದ ಒಳಗೆ ಕಾರ್ಯ ನಿರ್ವಹಿಸುತ್ತಿದ್ದರು. ಅವರಲ್ಲಿ 20 ಮಂದಿಯನ್ನು ರಕ್ಷಿಸಲಾಗಿದೆ ಎಂಬ ಮಾಹಿತಿ ಸ್ಥಳೀಯ ಅಧಿಕಾರಿಗಳಿಂದ ಲಭಿಸಿದೆ. ದುರಂತದಲ್ಲಿ ಸಾವನ್ನಪ್ಪಿದ ಕುಟುಂಬಸ್ಥರಿಗೆ ಮಹಾರಾಷ್ಟ್ರ ಸರ್ಕಾರ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ ಎಂದು ಡಿಸಿಎಂ ಅಜಿತ್ ಪವಾರ್​​ ಹೇಳಿದ್ದಾರೆ. ಪುಣೆಯ ಜಿಲ್ಲಾಧಿಕಾರಿ ರಾಜೇಶ್​​ ದೇಶ್​ಮುಖ್ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ತನಿಖಾ ತಂಡದ ಪ್ರಾಥಮಿಕ ವರದಿಗಾಗಿ ಕಾಯುತ್ತಿದ್ದೇವೆ. ವರದಿ ಬಂದ ಬಳಿಕ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಪುಣೆಯ ಗ್ರಾಮಾಂತರ ಎಸ್​ಪಿ ಅಭಿನವ್​ ದೇಶ್​​ಮುಖ್​​ ಹೇಳಿದ್ದಾರೆ. ಸದ್ಯಕ್ಕೆ ಇದು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಾಗಿದೆ. ಸಂತ್ರಸ್ತರ ಹುಡುಕಾಟಕ್ಕಾಗಿ ಕಂಪನಿಯ ಅಧಿಕಾರಿಗಳು ನಮ್ಮ ಜೊತೆ ಇದ್ದಾರೆ ಎಂದರು.

ಸೋಮವಾರ ಮಧ್ಯಾಹ್ನ 3.45 ರ ಸಮಯದಲ್ಲಿ ಈ ಘಟನೆ ನಡೆದಿತ್ತು. ದುರಂತದಲ್ಲಿ ಸಿಲುಕಿದವರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ ಹರಸಾಹಸ ಪಟ್ಟಿತು. ಆದರೆ ಬೆಂಕಿಯ ಜ್ವಾಲೆ ಹೆಚ್ಚಾದ್ದರಿಂದ ಅಗ್ನಿಶಾಮಕ ಸಿಬ್ಬಂದಿಯೂ ಸಹ ಕೆಲಕಾಲ ವಿಫಲರಾದರು. ಕಾರ್ಮಿಕರ ದೇಹ ಸುಟ್ಟು ಕರಕಲಾಗಿದ್ದರಿಂದ ಗುರುತು ಹುಡುಕುವುದು ಕಷ್ಟವಾಗಿತ್ತು. ಕುಟುಂಬಸ್ಥರಿಗೆ ಅವರ ಮೃತದೇಹ ಒಪ್ಪಿಸಲು ಬಹಳ ಸಮಯ ಹಿಡಿಯಿತು.

Exit mobile version