13 ವರ್ಷಗಳ ಬಳಿಕ ಟ್ವಿಟರ್‌ ಡಿಪಿ ಬದಲಿಸಿದ ಸುದೀಪ್

puneeth rajkumar

ಬೆಂಗಳೂರು ಅ 31 : 13 ವರ್ಷದ ಬಳಿಕ ನಟ ಕಿಚ್ಚ ಸುದೀಪ್ ಅವರು ತಮ್ಮ ಟ್ವಿಟರ್‌ ಡಿಪಿಯನ್ನು ಬದಲಿಸಿ, ಅಪ್ಪು ಚಿತ್ರವನ್ನು ಹಾಕಿದ್ದಾರೆ. ಪುನೀತ್ ರಾಜ್‌ಕುಮಾರ್ ಹಾಗೂ ಸುದೀಪ್ ಅವರು ಆತ್ಮೀಯರಾಗಿದ್ದರು ಎಂಬುವುದಕ್ಕೆ ಇದು ಸಾಕ್ಷಿಯಾಗಿದೆ.

ಪುನೀತ್ ಬಾಲ್ಯದಿಂದಲೂ ಪರಿಚಿತನಾಗಿರುವ ನಟ ಸುದೀಪ್‌, ಅಗಲಿದ ಗೆಳೆಯನ ಬಗ್ಗೆ ಭಾರವಾದ ಹೃದಯದಿಂದ ತಮ್ಮ ಭಾವನೆಗಳಿಗೆ ಅಕ್ಷರ ರೂಪ ನೀಡಿದ್ದಾರೆ. ಜತೆಗೆ, 13 ವರ್ಷದ ಬಳಿಕ ತಮ್ಮ ಟ್ವಿಟರ್‌ ಡಿಪಿಯನ್ನು ಬದಲಿಸಿ, ಅಪ್ಪು ಚಿತ್ರವನ್ನು ಹಾಕಿದ್ದಾರೆ. ಆ ಮೂಲಕ ಅಗಲಿದ ಗೆಳಯನಿಗೆ ಅತ್ಯುನ್ನತ ಗೌರವ ಸಲ್ಲಿಸಿದ್ದಾರೆ ಸುದೀಪ್‌. ಟ್ವಿಟರ್‌ನಲ್ಲಿ ಸುದೀಪ್‌ ಹಂಚಿಕೊಂಡ ಭಾವನೆಗಳು ಹೀಗಿವೆ

ಬಾಲ್ಯದಿಂದ ನಡೆದುಕೊಂಡ ಬಂದ ನಮ್ಮ ಈ ಪಯಣ. ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಭೇಟಿಯಾಗುವಷ್ಟರಲ್ಲೇ ಪುನೀತ್‌ ಒಬ್ಬ ಸ್ಟಾರ್‌. ಅಭೂತಪೂರ್ವ ಯಶಸ್ಸನ್ನು ಕಂಡ ಭಾಗ್ಯವಂತ ಚಿತ್ರದ ವಿಜಯಯಾತ್ರೆಯಲ್ಲಿ ತೊಡಗಿದ್ದರು. ಚಿತ್ರರಂಗಕ್ಕೂ ಹಾಗೂ ಚಿತ್ರರಂಗದವರಿಗೂ ನನ್ನ ತಂದೆಯೊಂದಿಗೆ ಹತ್ತಿರದ ನಂಟಿದ್ದಿದ್ದರಿಂದ, ಅವರ ಜೊತೆಗಿದ್ದವರೊಂದಿಗೆ ಪುನೀತ್‌ ಚಿತ್ರಮಂದಿರದ ಭೇಟಿ ಮುಗಿಸಿದ ನಂತರ ನಮ್ಮ ಮನೆಗೆ ಊಟಕ್ಕೆ ಬಂದರು. ನಾವಿಬ್ಬರೂ ಹೆಚ್ಚು ಕಮ್ಮಿ ಒಂದೇ ವಯಸ್ಸಿನವರಾಗಿದ್ದರಿಂದ ಕ್ಷಣ ಮಾತ್ರದಲ್ಲೇ ಸ್ನೇಹಿತರಾದೆವು. ಡೈನಿಂಗ್‌ ಟೇಬಲ್‌ ಮೇಲಿದ್ದ ಊಟಕ್ಕಿಂತ ನನ್ನ ಆಟಿಕೆಗಳ ಮೇಲೆ ಅವರು ಹೆಚ್ಚು ಆಸಕ್ತಿ ತೋರಿಸಿದ್ರು.

ಅಪ್ಪು ಹಾಗೂ ನಾನು ಆಟವಾಡುತ್ತಿದ್ದಾಗ, ಅವರ ಜತೆಗಿದ್ದ ಹೆಂಗಸು ಒಬ್ಬರು ಅವರಿಗೆ ಊಟ ಮಾಡಿಸಲು ಅವರ ಹಿಂದೆಯೇ ತಟ್ಟೆ ಹಿಡಿದುಕೊಂಡು ಓಡಿ ಬರುತ್ತಿದ್ದದ್ದು ನನಗಿನ್ನೂ ನೆನಪು. ಅವರ ಉತ್ಸಾಹ ನೋಡಿ, ನನ್ನಲ್ಲೂಇನ್ನಿಲ್ಲದ ಹುರುಪು. ನನ್ನ ಅಕ್ಕಪಕ್ಕದ ಮನೆಯವರು, ಮಕ್ಕಳು ಎಲ್ಲಾನಮ್ಮ ಮನೆಯನ್ನು ಸುತ್ತುವರಿದಿದ್ದರು. ಒಳಗಿದ್ದಿದ್ದು ಯಾರೋ ಸಾಮಾನ್ಯ ಬಾಲಕನಲ್ಲ, ಒಂದು ನಕ್ಷತ್ರ. ಮೇಲಾಗಿ ವರನಟ ಡಾ. ರಾಜಕುಮಾರ್‌ ಅವರ ಪುತ್ರ- ಪುನೀತ್‌.

ಅಲ್ಲಿಂದ ಇಲ್ಲಿಯವರೆಗೆ ಆಗಾಗ ನಾವು ಭೇಟಿ ಆಗಿದ್ದೂ ಉಂಟು. ಹಾಗೆ ಒಂದೇ ಚಿತ್ರರಂಗದಲ್ಲಿ ಸ್ನೇಹಿತರಾಗಿ ಮತ್ತೆ ಸಿಕ್ಕದ್ದೂ ಉಂಟು. ಈಗ ಒಬ್ಬ ಸ್ನೇಹಿತ ಮಾತ್ರವಲ್ಲ, ಅವರ ಪ್ರತಿಸ್ಪರ್ಧಿ ಆಗಿದ್ದೂ ಹೌದು. ಒಬ್ಬ ಅದ್ಭುತ ನಟ, ಒಳ್ಳೆಯ ಡಾನ್ಸರ್‌, ಫೈಟರ್‌ ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬ ಅಸಾಮಾನ್ಯ ವ್ಯಕ್ತಿ. ಅವರೊಂದಿಗಿನ ಸ್ಪರ್ಧೆಯನ್ನು ನಾನು ತುಂಬಾ ಆನಂದಿಸಿದ್ದೇನೆ. ನನ್ನನ್ನು ಇನ್ನಷ್ಟು ಉತ್ತಮನಾಗಲು ಅದು ಪ್ರೇರೇಪಿಸಿದೆ. ನಾನು ಅವರ ಸಮಕಾಲೀನ ನಟನಾಗಿದ್ದದ್ದು ನನಗೆ ಒಂದು ಹೆಮ್ಮೆ ಎಂದು ಅವರು ತಮ್ಮ ಭಾವನೆ ವೆಕ್ತಪಡಿಸಿದ್ದಾರೆ.

Exit mobile version