ಪುಲ್ವಾಮಾದಲ್ಲಿ ಉಗ್ರರ ಸದೆಬಡಿದ ಭಾರತೀಯ ಸೇನೆ

ಪುಲ್ವಾಮಾ ಡಿ 1 : ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆ ನಡೆಸುತ್ತಿರುವ ಭದ್ರತಾ ಪಡೆಗಳಿಗೆ ಮಹತ್ವದ ಜಯ ಸಿಕ್ಕಿದ್ದು, ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕಸ್ಬಯಾರ್ ಪ್ರದೇಶದಲ್ಲಿ ಬುಧವಾರ ನಡೆದ ಎನ್‌ಕೌಂಟರ್‌ನಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (ಜೆಇಎಂ) ಗೆ ಸೇರಿದ ಉನ್ನತ ಕಮಾಂಡರ್ ಸೇರಿದಂತೆ ಇಬ್ಬರು ಭಯೋತ್ಪಾದಕರ ಹತ್ಯೆಯಾಗಿದೆ.

ವರದಿಗಳ ಪ್ರಕಾರ, ಇಂದು ನಡೆದ ಎನ್‌ಕೌಂಟರ್‌ನಲ್ಲಿ ಹತರಾದ ಇಬ್ಬರು ಭಯೋತ್ಪಾದಕರಲ್ಲಿ ಜೈಶ್‌ನ ಉನ್ನತ ಕಮಾಂಡರ್ ಯಾಸಿರ್ ಪರ್ರೆ ಮತ್ತು  ಸುಧಾರಿತ ಸ್ಫೋಟಕ ಸಾಧನ (ಐಇಡಿ)ದ ಬಗ್ಗೆ ಪರಿಣತಿ ಹೊಂದಿದ ಉಗ್ರ ಸೇರಿದ್ದಾನೆ ಎಂದು ಹೇಳಲಾಗಿದೆ.

ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿರುವ ಕಾಶ್ಮೀರದ ಪೊಲೀಸ್ ಮಹಾ ನಿರೀಕ್ಷಕ ವಿಜಯ್ ಕುಮಾರ್, “ಪುಲ್ವಾಮಾ ಎನ್‌ಕೌಂಟರ್‌ನಲ್ಲಿ ಜೆಇಎಂ ಉನ್ನತ ಭಯೋತ್ಪಾದಕ ಕಮಾಂಡರ್ ಯಾಸಿರ್ ಪರ್ರೆ, ಐಇಡಿ ತಜ್ಞ ಮತ್ತು ವಿದೇಶಿ ಭಯೋತ್ಪಾದಕ ಫುರ್ಖಾನ್ ಅನ್ನು ಹತ್ಯೆ ಮಾಡಲಾಗಿದೆ. ಇಬ್ಬರೂ ಹಲವಾರು ಭಯೋತ್ಪಾದಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು” ಎಂದು ಹೇಳಿದ್ದಾರೆ.

ಇಬ್ಬರೂ ಭಯೋತ್ಪಾದನೆ ಸಂಬಂಧಿತ ಪ್ರಕರಣಗಳಲ್ಲಿ ಭಾಗಿಯಾಗಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕರು ಮತ್ತು ಅವರ ಹತ್ಯೆಯು ಭದ್ರತಾ ಪಡೆಗಳಿಗೆ ದೊಡ್ಡ ಪ್ರಗತಿಯಾಗಿದೆ ಎಂದು ವಿಜಯ್ ಕುಮಾರ್ ಹೇಳಿದರು. ಪುಲ್ವಾಮಾದ ಕಸ್ಬಯಾರ್ ಪ್ರದೇಶದಲ್ಲಿ ಮುಂಜಾನೆ ಎನ್‌ಕೌಂಟರ್ ನಡೆದಿತ್ತು.

ಭಯೋತ್ಪಾದಕರ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಪೊಲೀಸರು ಮತ್ತು ಸೇನೆಯ ಜಂಟಿ ತಂಡವು ಪ್ರದೇಶವನ್ನು ಸುತ್ತುವರೆದಿದೆ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಗುಂಡಿನ ಚಕಮಕಿ ನಡೆದಿದೆ.

Exit mobile version