ಬಾಗಿದ ಕುತ್ತಿಗೆ ಎಂದು ಹಿಯಾಳಿಸಿದವರ ವಿರುದ್ಧ ಸಾಧಿಸಿದ ರಾಧಿಕಾ ಗುಪ್ತಾ ; ಇಂದು ದೇಶದ ಅತ್ಯಂತ ಕಿರಿಯ CEO!

ತನ್ನ ಬಾಗಿದ ಕುತ್ತಿಗೆ ಹಾಗೂ ಕಣ್ಣಿನ ನ್ಯೂನತೆಯನ್ನೂ ಮೀರಿ ರಾಧಿಕಾ ಗುಪ್ತಾ(Radhika Gupta) ಅವರು ಎಡೆಲ್ವೀಸ್ MF ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ. ಆದರೆ ಕುತ್ತಿಗೆಯ ತೊಂದರೆಯಿಂದಾಗಿ ಅವರ ಜೀವನವೇ ನರಕವಾಗಿತ್ತು.

ಇದೇ ಕಾರಣದಿಂದಾಗಿ ಅವರು ತಮ್ಮ ಏಳನೇ ಉದ್ಯೋಗಾವಕಾಶವನ್ನೂ ಕೂಡ ಕಳೆದುಕೊಳ್ಳಬೇಕಾಯಿತು. ಆಗ ಜೀವನದಲ್ಲಿ ಜಿಗುಪ್ಸೆ ಹೊಂದಿದ ಅವರು, ತಮ್ಮ 22 ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೂ ತಲುಪಿದ್ದರಂತೆ. ದೇಶದ ಅತ್ಯಂತ ಕಿರಿಯ ಸಿಇಒಗಳಲ್ಲಿ ಒಬ್ಬರಾಗಿರುವ ರಾಧಿಕಾ ಅವರು ತಮ್ಮ ಸ್ಪೂರ್ತಿದಾಯಕ ಪ್ರಯಾಣವನ್ನು ‘ಆನ್‌ಲೈನ್ ಪೋರ್ಟಲ್ ಹ್ಯೂಮನ್ಸ್ ಆಫ್ ಬಾಂಬೆ’(Online Portal Humans Of Bombay) ಪೋಸ್ಟ್‌ನಲ್ಲಿ ವಿವರವಾಗಿ ಹಂಚಿಕೊಂಡಿದ್ದಾರೆ.

“ನಾನು ವಕ್ರವಾದ ಕುತ್ತಿಗೆಯ ತೊಂದರೆಯ ಜೊತೆಗೆ ಹುಟ್ಟಿದ್ದೇನೆ ಎನ್ನುವ ಸತ್ಯವನ್ನು ಬದಲಾಯಿಸಲು ನನಗೆ ಸಾಧ್ಯವಾಗಲಿಲ್ಲ. ನಾನು ಯಾವಾಗಲೂ ಶಾಲೆಯಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿರುತ್ತಿದ್ದೆ. ಪ್ರತಿನಿತ್ಯವೂ ನನ್ನನ್ನು ವಿಚಿತ್ರವಾಗಿ ನೋಡಲಾಗುತ್ತಿತ್ತು. ತಂದೆ ರಾಜತಾಂತ್ರಿಕರಾಗಿದ್ದರು. ನಾನು ನೈಜೀರಿಯಾಗೆ ಬರುವ ಮೊದಲು ಪಾಕಿಸ್ತಾನ, ನ್ಯೂಯಾರ್ಕ್ ಮತ್ತು ದೆಹಲಿಯಲ್ಲಿ ವಾಸಿಸುತ್ತಿದ್ದೆ. ನನ್ನನ್ನು ಭಾರತದಲ್ಲಿ ‘ಅಪ್ಪು’ ಎಂಬ ಅಡ್ಡಹೆಸರಿನಿಂದ ಕರೆಯುತ್ತಿದ್ದರು” ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ರಾಧಿಕಾ ಅವರು ತಮ್ಮ ಶಾಲಾ ದಿನಗಳಲ್ಲಿ ಎದುರಾದ ಅವಮಾನದ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ.

“ನನ್ನನ್ನು ನನ್ನ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ತಾಯಿಯ ಜೊತೆ ಹೋಲಿಸುತ್ತಿದ್ದರು. ತಾಯಿ ಇಷ್ಟು ಸುಂದರವಾಗಿದ್ದಾರೆ, ಮಗಳು ಎಷ್ಟು ಕೊಳಕು ಎಂದು ಜನರು ಯಾವಾಗಲೂ ನನಗೆ ಹೇಳುತ್ತಿದ್ದರು. ಇದರಿಂದ ನನ್ನ ಆತ್ಮವಿಶ್ವಾಸ ಕುಸಿಯುತ್ತಿತ್ತು ಎಂದು ಅವರು ಬರೆದಿದ್ದಾರೆ. ಆದರೂ ನಾನು ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಪ್ರಯತ್ನಿಸಿದೆ. ಆದರೆ ನನ್ನ ಕುತ್ತಿಗೆಯ ತೊಂದರೆಯಿಂದಾಗಿ ಏಳನೇ ಕೆಲಸದ ಅವಕಾಶ ಕೂಡ ನನ್ನ ಕೈ ಹಿಡಿಯಲಿಲ್ಲ. ಹೀಗಾಗಿ ಬೇಸತ್ತು 22 ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಯೋಚಿಸಿದೆ ಎಂದು ಗುಪ್ತಾ ನೆನಪಿಕೊಳ್ಳುತ್ತಾರೆ.

“ಸಂದರ್ಶನದಲ್ಲಿ ವಿಫಲವಾದಾಗ ನಾನು ಕಿಟಕಿಯಿಂದ ಹೊರಗೆ ಜಿಗಿಯಲು ಮುಂದಾಗಿದ್ದೆ, ಆದರೆ ಅಲ್ಲಿನ ಉದ್ಯೋಗಿಗಳು ನನ್ನನ್ನು ರಕ್ಷಿಸಿದರು. ನನ್ನನ್ನು ಮನೋವೈದ್ಯಕೀಯ ವಾರ್ಡ್‌ಗೆ ಸೇರಿಸಲಾಯಿತು, ಅಲ್ಲಿ ಪರೀಕ್ಷೆ ನಡೆಸಿ ಖಿನ್ನತೆಗೆ ಒಳಗಾಗಿದ್ದೇನೆ ಎಂದು ವೈದ್ಯರು ನಿರ್ಣಯಿಸಿದರು ಎಂದು ರಾಧಿಕಾ ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ತಮ್ಮ 25 ನೇ ವಯಸ್ಸಿನಲ್ಲಿ ಭಾರತಕ್ಕೆ ಮರಳಿದ ರಾಧಿಕಾ ಅವರು, ಪತಿ ಹಾಗೂ ಸ್ನೇಹಿತನೊಂದಿಗೆ ಸ್ವಂತ ಆಸ್ತಿ ನಿರ್ವಹಣೆ ಸಂಸ್ಥೆಯನ್ನು ಪ್ರಾರಂಭಿಸಿದರು. ಕೆಲವು ವರ್ಷಗಳ ನಂತರ, ಅವರ ಕಂಪನಿಯನ್ನು ಎಡೆಲ್ವೀಸ್ MF ಸ್ವಾಧೀನಪಡಿಸಿಕೊಂಡಿತು.

“ನಾನು ಕಾರ್ಪೊರೇಟ್ ಏಣಿಯನ್ನು ಏರಿದೆ. ಅವಕಾಶಗಳು ನನ್ನನ್ನು ಅರಸಿಕೊಂಡು ಬರಲಾರಂಭಿಸಿದವು” ಎಂದು ಗುಪ್ತಾ ಹೇಳುತ್ತಾರೆ. ಮುಂದೆ Edelweiss MF CEO ಗಾಗಿ ಹುಡುಕಲಾರಂಭಿಸಿದಾಗ, ಆರಂಭದಲ್ಲಿ ಅರ್ಜಿ ಹಾಕಲು ಹಿಂಜರಿದರೂ ಪತಿಯ ಪ್ರೋತ್ಸಾಹದಿಂದ ಪ್ರೇರಿತರಾಗಿ ಅರ್ಜಿ ಸಲ್ಲಿಸಲು ನಿರ್ಧರಿಸಿದರು. ಈ ಬಾರಿ ಅದೃಷ್ಟ ಅವರ ಕೈಹಿಡಿದಿತ್ತು, ಕೆಲವು ತಿಂಗಳುಗಳ ನಂತರ, ರಾಧಿಕಾ ಗುಪ್ತಾ ಅವರು 33 ನೇ ವಯಸ್ಸಿನಲ್ಲಿ ಭಾರತದ ಅತ್ಯಂತ ಕಿರಿಯ CEO ಗಳಲ್ಲಿ ಒಬ್ಬರಾಗಿ ಆಯ್ಕೆಯಾದರು.

ಚಿಕ್ಕ ಪುಟ್ಟ ನೆಪಗಳನ್ನೇ ಮುಂದಿಟ್ಟುಕೊಂಡು ಜೀವನದಲ್ಲಿ ನಿರಾಶರಾಗುವವರಿಗೆ ಇವರ ಜೀವನ ನಿಜಕ್ಕೂ ಸ್ಫೂರ್ತಿದಾಯಕ!

Exit mobile version