ರಾಯಚೂರಿನಲ್ಲಿ ರೈಲ್ ರೊಕೋ; ಬ್ಯಾರಿಕೇಡ್ ತಳ್ಳಿ ನಿಲ್ದಾಣಕ್ಕೆ ನುಗ್ಗಿದ ರೈತರು

ರಾಯಚೂರು ಫೆ. 18 : ಕೇಂದ್ರ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಜ್ಯಾದ್ಯಂತ ರೈತರು ರೈಲ್ ರೊಕೋ ಚಳವಳಿ ನಡೆಸಲು ಮುಂದಾಗಿದ್ದಾರೆ. ರಾಯಚೂರಿನಲ್ಲಿ ಪೊಲೀಸರು ಹಾಕಿರುವ ಬ್ಯಾರಿಕೇಡ್ಗಳನ್ನು ತಳ್ಳಿ ರೈತರು ನಿಲ್ದಾಣದ ಒಳ ನುಗ್ಗಿದ್ದಾರೆ.
ದೆಹಲಿ ರೈತರ ಪ್ರತಿಭಟನೆಗಳಿಗೆ ರಾಜ್ಯದ ರೈತರಿಂದ ಬೆಂಬಲ ವ್ಯಕ್ತವಾಗಿದೆ. ಇಂದು ರಾಯಚೂರಿನಲ್ಲಿ ಸಂಯುಕ್ತ ರೈತ ಸಂಘರ್ಷ ಸಮಿತಿ ರೈಲು ರೊಕೋ ಚಳುವಳಿ ನಡೆಸುತ್ತಿದೆ. ರೈಲ್ವೆ ನಿಲ್ದಾಣದಲ್ಲಿ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಂಡಿದ್ದ ರೈತರು ರೈಲು ಬರುವುದನ್ನೇ ಕಾದು ಕುಳಿತಿದ್ದರು. ಸ್ಥಳದಲ್ಲಿ ರೈಲ್ವೆ ಪೊಲೀಸ್ ಹಾಗೂ ಪಶ್ಚಿಮ ಪೊಲೀಸ್ ಠಾಣೆ ಪೊಲೀಸರಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ಪೊಲೀಸರನ್ನೂ ಲೆಕ್ಕಿಸದ ಪ್ರತಿಭಟನಾಕಾರರು ನಿಲ್ದಾಣದ ಒಳಗೆ ಬಿಡಿ ಇಲ್ಲ ಅರೆಸ್ಟ್ ಮಾಡಿ ಎಂದು ಪಟ್ಟುಹಿಡಿದಿದ್ದರು. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ತಳ್ಳಾಡ ನೂಕಾಟಗಳು ಸಂಭವಿಸಿವೆ. ಹಲ ಪ್ರತಿಭಟನಾಕಾರರು ಬ್ಯಾರಿಕೇಟ್ಗಳನ್ನು ಎಳೆದು ಬಿಸಾಕಿ ಒಳನುಗ್ಗಲು ಯತ್ನಿಸಿದ್ದಾರೆ, ಪೊಲೀಸರು ಅಂಥವರನ್ನು ಎಳೆದು ಹಾಕಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ತೀವ್ರಗಳಿಸಿದ್ದು, ಪೊಲೀಸರ ಬ್ಯಾರಿಕೇಡ್ಗಳನ್ನು ಎಳೆದು ಬಿಸಾಕಿ ರೈಲ್ವೆ ನಿಲ್ದಾಣದ ಒಳಗೆ ನುಗ್ಗಿದ್ದಾರೆ. ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಎಷ್ಟೇ ಪ್ರಯತ್ನಮಾಡುತ್ತಿದ್ದರೂ ಅದು ವಿಫಲವಾಗುತ್ತಿದೆ, ರೈತರ ಹೋರಾಟ ಪೊಲೀಸರ ಕಂಟ್ರೋಲ್ಗೆ ಸಿಗುತ್ತಿಲ್ಲ.

Exit mobile version