ಸೂಪರ್‌ ಸ್ಟಾರ್ ರಜನಿಕಾಂತ್ ಆಸ್ಪತ್ರೆಗೆ ದಾಖಲು

ಚೆನೈ ಅ 29 : ಸೂಪರ್ ಸ್ಟಾರ್ ರಜನಿಕಾಂತ್ ಹಠಾತ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ನಟ ರಜನಿಕಾಂತ್ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಚೆನ್ನೈನ ಅಲ್ವಾರ್‌ಪೇಟ್‌ನಲ್ಲಿರುವ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದರ ಬೆನ್ನಲ್ಲೇ ಮಾಹಿತಿ ನೀಡಿರುವ ಲತಾ ರಜನೀಕಾಂತ್, ರಜನಿಕಾಂತ್ ಅವರು  ಫುಲ್ ಬಾಡಿ ಚೆಕಪ್ ಗಾಗಿ ಆಸ್ಪತ್ರೆಗೆ ತೆರಳಿದ್ದಾರೆ. ಒಂದು ದಿನ ಆಸ್ಪತ್ರೆಯಲ್ಲಿಯೇ ಇದ್ದು ಅಲ್ಲಿಂದಲೇ ಅವರನ್ನು ತಪಾಸಣೆ ಮಾಡಲಾಗುವುದು. ರಜನಿಕಾಂತ್ ಆರೋಗ್ಯವಾಗಿದ್ದಾರೆ ಹಾಗಾಗಿ ಅಭಿಮಾನಿಗಳು ಆತಂಕ ಪಡಬೇಡಿ ಎಂದು ಮನವಿ ಮಾಡಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್ ಅವರು ಆಸ್ಪತ್ರೆಯಲ್ಲಿ ನಿಯಮಿತವಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗುತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. “ಇದು ಸಾಮಾನ್ಯವಾಗಿ ನಿಯಮಿತ ಮಧ್ಯಂತರದಲ್ಲಿ ಮಾಡಲಾಗುವ ವೈದ್ಯಕೀಯ ಪರೀಕ್ಷೆಯಾಗಿದೆ. ಆದ್ದರಿಂದ ಅವರನ್ನು ಈಗ ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ದಾಖಲಿಸಲಾಗಿದೆ” ಎಂದು ತಿಳಿದುಬಂದಿದೆ.

70 ವರ್ಷ ವಯಸ್ಸಿನ ನಟ ರಜನಿಕಾಂತ್ ಅವರು 2019 ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಕ್ಟೋಬರ್ 25ರಂದು ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ರಜನಿಕಾಂತ್ ಅವರಿಗೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಿದ್ದರು.

Exit mobile version