ಅಕ್ಟೋಬರ್ 8ಕ್ಕೆ ರಾಮನಾಥ್ ಕೋವಿಂದ್ ಶೃಂಗೇರಿ ಶ್ರೀ ಶಾರದಾ ಪೀಠಕ್ಕೆ ಭೇಟಿ

ಚಿಕ್ಕಮಗಳೂರು ಅ 6 : ಅಕ್ಟೋಬರ್ 8ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶೃಂಗೇರಿ ಶ್ರೀ ಶಾರದಾ ಪೀಠಕ್ಕೆ ಭೇಟಿ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳಿಂದ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಪೂರ್ವ ತಯಾರಿ ನಡೆಸುತ್ತಿದ್ದು ಈ ಒಂದು ದಿನದ ಖಾಸಗೀ ಭೇಟಿಗೆ ವ್ಯವಸ್ಥೆಯ ಹಾಗೂ ರಕ್ಷಣೆಯ ದೃಷ್ಟಿಯಿಂದ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ.

ಶೃಂಗೇರಿಯ ಗಾಂಧಿ ಮೈದಾನದಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತಿದ್ದು, ಎಡೆಬಿಡದೆ ಕಾಮಗಾರಿ ನಡೆಯುತ್ತಿದೆ. ಇದೇ ಕಾರಣದಿಂದ ಗಾಂಧಿ ಮೈದಾನದ ವ್ಯಾಪಾರಸ್ಥರು ಸಹ ಅಂಗಡಿ ಮುಂಗಟ್ಟುಗಳನ್ನು ಖಾಲಿ ಮಾಡಿದ್ದಾರೆ. ರಾಷ್ಟ್ರಪತಿಗಳ ಭೇಟಿ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತವಾಗಿ ತೆರವುಗೊಳಿಸಿರುವುದಾಗಿ ವ್ಯಾಪಾರಸ್ಥರು ಹೇಳಿದ್ದಾರೆ. ಆದರೆ ಕಳೆದ ಎರಡು ವರ್ಷದಿಂದ ಕೊರೋನಾದಿಂದಾಗಿ ವ್ಯಾಪಾರ ವ್ಯವಹಾರ ಇಲ್ಲದೇ ನಷ್ಟದಲ್ಲಿದ್ದವರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

ಭೇಟಿಯ ತಯಾರಿಯ ಪೂರ್ವಭಾವಿ ಸಭೆಯ ನಿರ್ಧಾರದಂತೆ ಹೆಲಿಪ್ಯಾಡ್ ನಿರ್ಮಾಣ ದೃಷ್ಟಿಯಿಂದ ಗಾಂಧಿ ಮೈದಾನದಲ್ಲಿ ಇರುವ ಮರಗಳನ್ನು ಕಡಿಯಲು ಅನುಮತಿಸಲಾಗಿದ್ದು, ಕಟಾವು ಕಾರ್ಯ ನಡೆಯುತ್ತಿದೆ. ಆದರೆ ಪರ್ಯಾಯವಾಗಿ ಯಾವುದೇ ಗಿಡಗಳನ್ನು ನೆಡುವ ಕಾರ್ಯ ಮಾಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Exit mobile version