ರಾಮನಗರದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ

ರಾಮನಗರ, ಜನವರಿ. 05: ಕೊರೋನಾ ಸೋಂಕು ತಡೆಗಟ್ಟಲು  ಕೊರೋನಾ ವಾರಿಯರ್ಸ್ ಆಗಿ ಕೆಲಸ ಮಾಡುವಂತಹ ಆರೋಗ್ಯ ಕಾರ್ಯಕರ್ತರಿಗೆ ರಾಮನಗರ  ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಸುಮಾರು 8405 ಮಂದಿಗೆ ಕೋವಿಡ್-19 ಲಸಿಕೆ ನೀಡಲು ನಿರ್ಧಾರ ಮಾಡಿದೆ” ಎಂದು ಜಿಲ್ಲಾ ಆರೋಗ್ಯಾಧಿಕಾರಿ ನಿರಂಜನ್ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ರಾಜ್ಯದಲ್ಲಿ ಕೋವಿಡ್ ಲಸಿಕೆ ನೀಡಲು ಸಿದ್ಧತೆ ನಡೆಯುತ್ತಿದೆ. ಜಿಲ್ಲೆಯಲ್ಲಿ 8405 ಮಂದಿಯನ್ನು ಲಸಿಕೆ ನೀಡಲು ಗುರುತಿಸಿದ್ದು, ಸರ್ಕಾರಿ ಆರೋಗ್ಯ ಕಾರ್ಯಕರ್ತರು 5,440 ಮಂದಿ ಹಾಗೂ 2,961 ಮಂದಿ ಖಾಸಗಿ ಆರೋಗ್ಯ ಕಾರ್ಯಕರ್ತರಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು” ಎಂದರು.

“ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡಲು ಸುಮಾರು 270 ಮಂದಿಗೆ ತರಬೇತಿ ನೀಡಲಾಗಿದೆ. ಸುಮಾರು 395 ಆರೋಗ್ಯ ಕೇಂದ್ರಗಳನ್ನು ಇದಕ್ಕಾಗಿ ಸಜ್ಜುಗೊಳಿಸಿದ್ದೇವೆ. ಜಿಲ್ಲೆಯಲ್ಲಿ ಲಸಿಕೆಗಳನ್ನು ಶೇಖರಣೆ ಮಾಡಲು ಅಗತ್ಯವಾದ ಫ್ರೀಜರ್ ಸೌಲಭ್ಯ ಎಲ್ಲಾ ಕೇಂದ್ರಗಳಲ್ಲಿ ಇದೆ” ಎಂದು ವಿವರಣೆ ನೀಡಿದರು.

“ಕೇಂದ್ರ ಸರ್ಕಾರವು ದೇಶದ ಎಲ್ಲಾ ರಾಜ್ಯಗಳಿಗೆ ಶೀಘ್ರದಲ್ಲಿಯೇ ಕೋವಿಡ್-19 ಲಸಿಕೆಯನ್ನು ಹಸ್ತಾಂತರ ಮಾಡಲಿದೆ. ಲಸಿಕೆಯನ್ನು ಮೊದಲ ಹಂತದಲ್ಲಿ ಕೋವಿಡ್-19 ವಾರಿಯರ್ಸ್ ಗೆ ನೀಡಲು ಮುಂದಾಗಿದೆ,” ಎಂದು ನಿರಂಜನ್ ತಿಳಿಸಿದರು.

ಎರಡನೇ ಹಂತದಲ್ಲಿ 60 ವರ್ಷ ಹಾಗೂ 50 ವರ್ಷ ಮೇಲ್ಪಟ್ಟ ಜನರಿಗೆ ಲಸಿಕೆ ನೀಡಲಾಗುತ್ತದೆ. ನಂತರ ಹಂತ ಹಂತವಾಗಿ ಜನರಿಗೆ ಲಸಿಕೆ ಸಿಗಲಿದೆ” ಎಂದು ಆರೋಗ್ಯಾಧಿಕಾರಿ ನಿರಂಜನ್ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಕೋವಿಡ್ ಹಾವಳಿ ಕಡಿಮೆಯಾಗಿದ್ದು ಸಮಾಧಾನದ ತಂದಿದೆ. ಜನರು ಅಗತ್ಯವಾದ ಮುನ್ನೆಚ್ಚರಿಕೆ ಕ್ರಮಗಳನ್ನು  ಪಾಲಿಸುವ ಮೂಲಕ ಜಿಲ್ಲೆಯನ್ನು ಕೋವಿಡ್ ಮುಕ್ತ ಮಾಡಲು ಸಹಕಾರ ನೀಡಬೇಕು” ಎಂದು ಕೇಳಿಕೊಂಡರು.

Exit mobile version