ರಮೇಶ್‌ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿ: ಸಿದ್ದರಾಮಯ್ಯ ಆಗ್ರಹ

ಬೆಂಗಳೂರು, ಮಾ. 23: ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಸಿ.ಡಿ ಪ್ರಕರಣ ಮಂಗಳವಾರ ವಿಧಾನಸೌಧದಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿತು. ಕಾಂಗ್ರೆಸ್‌ ನಾಯಕರು ಸದನದಲ್ಲಿ ಸಿ.ಡಿ ಗಳನ್ನು ಪ್ರದರ್ಶಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ರಮೇಶ್‌ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಬೇಕು. ಸಿ.ಡಿ ಯಲ್ಲಿದ್ದ ಯುವತಿಗೆ ಕೂಡಲೇ ರಕ್ಷಣೆ ಕೊಡಬೇಕು. ನಾನು ರಮೇಶ್ ಜಾರಕಿಹೊಳಿ ಬಳಿ ಕೆಲಸ ಕೊಡಿಸುವಂತೆ ಕೋರಿ ಹೋಗಿದ್ದೆ, ಅವರು ನನ್ನನ್ನು ಬಳಸಿಕೊಂಡಿದ್ದಾರೆಂದು ಆ ಯುವತಿ ಹೇಳಿದ್ದಾರೆ. ಹೀಗಾಗಿ, ಅದು ರೇಪ್ ಆಗುತ್ತದೆ. ರಮೇಶ್ ಜಾರಕಿಹೊಳಿ ವಿರುದ್ಧ ರೇಪ್ ಕೇಸ್ ಹಾಕಬೇಕು ಎಂದು ಒತ್ತಾಯಿಸಿದರು.

ಎಸ್​ಐಟಿ ಮೇಲೆ ನಮಗೆ ನಂಬಿಕೆ ಇಲ್ಲ. ಹೈಕೋರ್ಟ್ ನಿವೃತ್ತ ನ್ಯಾಯಾಧೀಶರನ್ನು ನೇಮಿಸಬೇಕು. ಅದು ನಕಲಿ ಸಿ.ಡಿ ಎಂದು ಬಿಂಬಿಸಿ ಪ್ರಕರಣ ಮುಚ್ಚಿಹಾಕಲು ಸರ್ಕಾರ ಹೊರಟಿದೆ. ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದ ಮೇಲೆ ನಾವೂ ಯಾಕೆ ಅಸೆಂಬ್ಲಿಗೆ ಬರಬೇಕು? ಹೈಕೋರ್ಟ್ ಸಿಜೆ ನೇತೃತ್ವದಲ್ಲಿ ತನಿಖೆ ನಡೆಸಿದರೆ ಆ ಹೆಣ್ಣುಮಗಳಿಗೆ ನ್ಯಾಯ ಸಿಗುತ್ತದೆ ಎಂದು ಆಗ್ರಹಿಸಿದರು.

ಅಲ್ಲದೇ, ರಮೇಶ್ ಪ್ರಕರಣ ಬೇರೆ, ಎಚ್‌.ವೈ.ಮೇಟಿ ಕೇಸ್ ಬೇರೆ. ತನಿಖೆಯಾಗಬೇಕಾದರೆ ಎಫ್‌ಐಆರ್ ದಾಖಲಿಸಬೇಕಲ್ವಾ? ಎಫ್‌ಐಆರ್ ದಾಖಲಿಸದೆ ಹೇಗೆ ತನಿಖೆ ಮಾಡುತ್ತಾರೆ? ನಿರ್ಭಯಾ ಕಾಯ್ದೆ ಪ್ರಕಾರ ಎಫ್‌ಐಆರ್ ದಾಖಲಿಸಬೇಕು. ಸದನದಲ್ಲಿ ನಮ್ಮ ಹೋರಾಟ ಮುಂದುವರಿಯುತ್ತದೆ. ಕೋರ್ಟ್ ಮೊರೆ ಹೋದ 6 ಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

Exit mobile version