ಪರಿಸ್ಥಿತಿ ಸರಿಯಾಗಿ ಅವಲೋಕಿಸಿ ಲಾಕ್ ಡೌನ್ ನಿರ್ಬಂಧ ಸಡಿಲಿಸಿ: ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಎಚ್ಚರಿಕೆ

ನವದೆಹಲಿ,ಜೂ.19: ಕೊರೊನಾ ಇಳಿಕೆಯ ಆಧಾರದ ಮೇಲೆ ನಿರ್ಬಂಧಗಳ ಸಡಿಲಿಕೆಗೆ ಮುಂದಾಗಿರುವ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು, ಎಚ್ಚರಿಕೆಯಿಂದ ನಿರ್ಬಂಧ ಸಡಿಲಿಸುವ ಜತೆಗೆ, ಪರೀಕ್ಷೆ, ಸಂಪರ್ಕಿತರ ಪತ್ತೆ, ಚಿಕಿತ್ಸೆ, ಲಸಿಕೆ (‘ಟೆಸ್ಟ್‌–ಟ್ರ್ಯಾಕ್‌–ಟ್ರೀಟ್‌–ವ್ಯಾಕ್ಸಿನೇಷನ್‌‘) ಎಂಬ ನಾಲ್ಕು ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸುವ ಮೂಲಕ ಸೋಂಕು ಹರಡುವುದನ್ನು ತಡೆಯಬೇಕು ಎಂದು ಕೇಂದ್ರ ಗೃಹಸಚಿವಾಲಯ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ.

ಈ ಕುರಿತು ಸಲಹೆ ರವಾನಿಸಿರುವ ಕೇಂದ್ರ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಕುಮಾರ್‌ ಭಲ್ಲಾ, ‘ಪ್ರಸ್ತುತ ಸನ್ನಿವೇಶದಲ್ಲಿ ಸೋಂಕಿನ ಪ್ರಸರಣಕ್ಕೆ ತಡೆಯೊಡ್ಡಲು ಲಸಿಕೆ ಹಾಕುವ ಪ್ರಕ್ರಿಯೆ ನಿರ್ಣಾಯಕವಾಗಿದೆ. ಆದ್ದರಿಂದ, ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಲಸಿಕೆ ಹಾಕುವ ವೇಗವನ್ನು ಹೆಚ್ಚಿಸಬೇಕು. ಗರಿಷ್ಠ ಸಂಖ್ಯೆಯ ಜನರಿಗೆ ತ್ವರಿತಗತಿಯಲ್ಲಿ ಲಸಿಕೆ ಹಾಕಿಸಿಕೊಳ್ಳುವಂತೆ ಉತ್ತೇಜಿಸಬೇಕು. ಕೊರೊನಾ ಸೋಂಕಿನ ಸಕ್ರಿಯ ಪ್ರಕರಣಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ, ಕೆಲವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್‌ ನಿರ್ಬಂಧಗಳನ್ನು ಸಡಿಲಗೊಳಿಸುತ್ತಿವೆ. ಪ್ರಾದೇಶಿಕವಾಗಿ ಕೊರೊನಾ ಸೋಂಕು ಹರಡುತ್ತಿರುವ ತೀವ್ರತೆ ಹಾಗೂ ಪರಿಸ್ಥಿತಿಯನ್ನು ಸರಿಯಾಗಿ ಅರ್ಥೈಸಿಕೊಂಡು ನಿರ್ಬಂಧ ಸಡಿಲಿಕೆ ಅಥವಾ ನಿರ್ಬಂಧಗಳನ್ನು ಮುಂದುವರಿಸುವಂತಹ ತೀರ್ಮಾನಗಳನ್ನು ತೆಗೆದುಕೊಳ್ಳುವಂತೆ‘ ಕಾರ್ಯದರ್ಶಿ ತಿಳಿಸಿದ್ದಾರೆ.

‘ಸೋಂಕಿನ ಪ್ರಕರಣಗಳು ಕಡಿಮೆಯಾಗಿರುವ ಆಧಾರದ ಮೇಲೆ ಅಗತ್ಯ ಚಟುವಟಿಕೆಗಳ ಮೇಲಿನ ನಿರ್ಬಂಧವನ್ನು ಸಡಿಲಿಸಲಾಗುತ್ತದೆ. ಆದರೆ, ನಿಬಂಧನೆ ಸಡಿಲಿಸುವುದರಿಂದ ಮುಂದೆ ಆಗುವ ಪರಿಣಾಮಗಳ ಬಗ್ಗೆ ಯೋಚಿಸಿ ಜಾಗ್ರತೆಯಿಂದ ಚಟುವಟಿಕೆಗಳ ಆರಂಭಕ್ಕೆ ಅನುಮತಿ ನೀಡಬೇಕು‘ ಎಂದು ಎಚ್ಚರಿಸಿದ್ದಾರೆ.

Exit mobile version