ರೋಹಿಣಿ ಸಿಂಧೂರಿಯ ಆರೋಪವನ್ನು ತಳ್ಳಿ ಹಾಕಿ ಬಹಿರಂಗವಾಗಿ ಸವಾಲೆಸೆದ ಸಾ. ರಾ. ಮಹೇಶ್‌

ಮೈಸೂರು, ಜೂ. 10: ಮೈಸೂರಿನಲ್ಲಿ ಭೂಹಗರಣದ ಜಟಾಪಟಿ ತಾರಕಕ್ಕೇರಿದೆ. ಮೈಸೂರು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ, ಶಾಸಕ ಸಾರಾ ಮಹೇಶ್​ ರಾಜಕಾಲುವೆ ಮೇಲೆ ಕಲ್ಯಾಣಮಂಟಪ ನಿರ್ಮಿಸಿದ್ದಾರೆ ಎಂದು ಆರೋಪಿಸಿದ್ದರು. ರೋಹಿಣಿ ಸಿಂಧೂರಿ ಮಾಡಿರುವ ಆರೋಪವನ್ನ ತಳ್ಳಿ ಹಾಕಿರುವ ಸಾರಾ ಮಹೇಶ್​ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ.

ನನ್ನ ಒಡೆತನದ ಸಾರಾ ಚೌಲ್ಟ್ರಿ ರಾಜಕಾಲುವೆ ಮೇಲೆ ನಿರ್ಮಾಣವಾಗಿಲ್ಲ. ಬೇಕಿದ್ದರೆ ಉನ್ನತ ಮಟ್ಟದ ಅಧಿಕಾರಿಗಳು ಬಂದು ಸರ್ವೇ ಮಾಡಲಿ. ರಾಜಕಾಲುವೆ ಮೇಲೆ ಚೌಲ್ಟ್ರಿ ನಿರ್ಮಾಣವಾಗಿದೆ ಅನ್ನೋದು ಸಾಬೀತಾದಲ್ಲಿ ಅದನ್ನ ಸಾರ್ವಜನಿಕರ ಬಳಕೆಗೆಂದು ರಾಜ್ಯಪಾಲರಿಗೆ ಹಸ್ತಾಂತರ ಮಾಡುತ್ತೇನೆ. ಅಲ್ಲದೆ ಸಾರ್ವಜನಿಕ ಜೀವನದಿಂದಲೇ ನಾನು ನಿವೃತ್ತಿ ಪಡೆಯುತ್ತೇನೆ. ಒಂದು ವೇಳೆ ರೋಹಿಣಿ ಸಿಂಧೂರಿ ಮಾಡಿದ ಆರೋಪ ಸುಳ್ಳಾದಲ್ಲಿ ಅವರನ್ನ ಐಎಎಸ್​ ಹುದ್ದೆಯಿಂದ ಅಮಾನತು ಮಾಡಬೇಕು ಎಂದು ಸಾರಾ ಮಹೇಶ್​ ಬಹಿರಂಗ ಸವಾಲೆಸೆದಿದ್ದಾರೆ.

ರೋಹಿಣಿ ಸಿಂಧೂರಿ ವರ್ಗಾವಣೆಗೆ ಭೂ ಮಾಫಿಯಾವೇ ನೇರ ಕಾರಣ ಎಂಬ ಮಾತು ಕೇಳಿ ಬರುತ್ತಿದೆ. ಈಗ ಇದಕ್ಕೆ ಸಂಬಂಧಿಸಿದಂತೆ, ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಒಂದು ಆಡಿಯೋ ವೈರಲ್ ಆಗಿದೆ.  ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಹಾಗೂ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಅವರ ನಡುವಿನ ಜಗಳ ತಾರಕಕ್ಕೇರಿದಾಗ ಸರ್ಕಾರ ವರ್ಗಾವಣೆ ಅಸ್ತ್ರವನ್ನು ಪ್ರಯೋಗಿಸಿತ್ತು. ರೋಹಿಣಿ ಸಿಂಧೂರಿ ಒಲ್ಲದ ಮನಸ್ಸಿನಿಂದಲೇ ಮೈಸೂರಿಗೆ ಭಾವುಕ ವಿದಾಯ ಹೇಳಿದ್ದರು. ಇದಾದ ಬಳಿಕ ಸಿಂಧೂರಿ ವರ್ಗಾವಣೆ ಹಿಂದೆ ಭೂ ಮಾಫಿಯಾ ಇದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಜನಪ್ರತಿಧಿಗಳ ಕೈವಾಡವೂ ಇದೆ ಎಂಬ ಆರೋಪ ಕೇಳಿ ಬಂದಿತ್ತು. ಈಗ ಇದಕ್ಕೆ ಪೂರಕ ಎನ್ನುವಂತೆ ರೋಹಿಣಿ ಸಿಂಧೂರಿ ಅವರ ಆಡಿಯೋ ಒಂದು ವೈರಲ್ ಆಗಿದೆ.

ಇದರಲ್ಲಿ ಮಾತನಾಡಿರುವ ರೋಹಿಣಿ ಸಿಂಧೂರಿ, ನಾನು ಭೂ ಮಾಫಿಯಾ ವಿರುದ್ಧ ಹೋರಾಡಿದಕ್ಕೆ ವರ್ಗಾವಣೆ ಭಾಗ್ಯ ಸಿಕ್ಕಿತು.  ಮೈಸೂರಿನಲ್ಲಿ ಭೂ ಮಾಫಿಯಾವನ್ನು ಒಂದು ಪ್ರವೃತ್ತಿ ಮಾಡಿಕೊಂಡು ಬಂದಿದ್ದಾರೆ. ಈ ಸಣ್ಣ ಸಣ್ಣ ರಾಜಕಾರಣಿಗಳು ಈ ಪ್ರವೃತ್ತಿ ಮಾಡ್ಕೊಂಡಿದ್ದಾರೆ. ಸಾರಾ ಮಹೇಶ್, ರಾಜೀವ್ ಇಂತವರೆಲ್ಲರದ್ದು ಇದೇ ಪ್ರವೃತ್ತಿ ಎಂದು ಜನಪ್ರತಿನಿಧಿಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ.

ಅಧಿಕಾರಿಗಳನ್ನ ಹೆದರಿಸಿ, ಬೆದರಿಸಿ ಕೆಲಸ‌ ಮಾಡಿಸಿಕೊಳ್ಳೋದು‌. ಇದೀಗ ಸುದ್ದಿಗೋಷ್ಠಿ ಮಾಡಿಕೊಂಡು ಹೆಸರಿಸುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ ಆಮಿಷ ತೋರಿಸುವ ಪ್ರವೃತ್ತಿ ಬೆಳೆಸಿಕೊಂಡು ಬಂದಿದ್ದಾರೆ ಎಂದು ನೇರವಾಗಿಯೇ ಸಾರಾ ಮಹೇಶ್ ಹಾಗೂ ರಾಜೀವ್ ವಿರುದ್ಧ ಸಿಂಧೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version