ರೋಹಿತ್ ಚಕ್ರತೀರ್ಥ ಅವರು ಐಐಟಿ ಪ್ರೊಫೆಸರ್ : ಬಿ.ಸಿ.ನಾಗೇಶ್

bc nagesh

ರಾಜ್ಯ ಶೈಕ್ಷಣಿಕ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿರುವ ರೋಹಿತ್ ಚಕ್ರತೀರ್ಥ(Rohith Chakratheertha) ಅವರು ಐಐಟಿ ಪ್ರೊಫೆಸರ್(IIT Professor). ಅವರು ಶೈಕ್ಷಣಿಕವಾಗಿ ಸಿಇಟಿ ಮತ್ತು ಐಐಟಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ ಎಂದು ಶಿಕ್ಷಣ ಸಚಿವ(Education Minister) ನಾಗೇಶ್(BC Nagesh) ಸ್ಪಷ್ಟಪಡಿಸಿದ್ದಾರೆ.

ತಿಳಿಗೇಡಿ ಯುವಕನಿಂದ ಪಠ್ಯಪುಸ್ತಕ ಪರಿಷ್ಕರಣೆ ಮಾಡಲಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಟೀಕಿಸಿದ್ದರು. ಅದಕ್ಕೆ ತಿರುಗೇಟು ನೀಡಿರುವ ಬಿ.ಸಿ.ನಾಗೇಶ್ ಅವರು, ರೋಹಿತ್ ಚಕ್ರತೀರ್ಥ ಅವರು ಐಐಟಿ ಪ್ರೊಫೆಸರ್ ಆಗಿದ್ದವರು. ಇನ್ನು ಶಿಕ್ಷಣ ತಜ್ಞರು ಎನ್ನುವುದಕ್ಕೆ ಪ್ರಮಾಣಪತ್ರವನ್ನು ಯಾರು ಕೊಡುತ್ತಾರೆ ಎಂದು ಪ್ರಶ್ನಿಸಿದರು.

ಇನ್ನು ಪಠ್ಯಪುಸ್ತಕದಲ್ಲಿ ನಮ್ಮ ನೈಜ ಇತಿಹಾಸವನ್ನು ಬಿಂಬಿಸಿದ್ದೇವೆ. ಆದರೆ ಇದನ್ನು ಸಹಿಸದ ಕಾಂಗ್ರೆಸ್(Congress) ಶಿಕ್ಷಣ ಇಲಾಖೆ ಬಗ್ಗೆ ನಿರಂತರವಾಗಿ ಅಪಪ್ರಚಾರ ನಡೆಸುತ್ತಿದೆ. ನೂತನ ಪಠ್ಯಪುಸ್ತಕದಿಂದ ಯಾವುದೇ ಸಮಾಜ ಸುಧಾರಕರ ಪಠ್ಯವನ್ನು ಕೈಬಿಟ್ಟಿಲ್ಲ. ಶ್ರೀ ನಾರಾಯಣ ಗುರುಗಳ ಪಠ್ಯವನ್ನು ಕನ್ನಡ ಭಾಷಾ ವಿಭಾಗಕ್ಕೆ ವರ್ಗಾಯಿಸಿದ್ದೇವೆ. ಆದರೆ ಇದ್ಯಾವುದರ ಬಗ್ಗೆಯೂ ಸರಿಯಾದ ಮಾಹಿತಿ ಇಲ್ಲದ ಕಾಂಗ್ರೆಸ್ ಜನರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದರು.

ಇನ್ನು ಈ ಹಿಂದೆ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯೇ ಅಂಬೇಡ್ಕರ್ ಮತ್ತು ಗಾಂಧಿಜೀಯವರ ಕುರಿತಾದ ಪಠ್ಯವನ್ನು ತೆಗೆದು ಹಾಕಿತ್ತು. ಮೈಸೂರು ಮಹಾರಾಜರ ಕುರಿತಾಗಿದ್ದ ಆರು ಪುಟಗಳ ಪಠ್ಯವನ್ನು ತೆಗೆದು ನಾಲ್ಕು ಸಾಲುಗಳಿಗೆ ಇಳಿಸಿತ್ತು. ಆಗ ಅವರನ್ನು ಯಾರು ಪ್ರಶ್ನೆ ಮಾಡಲಿಲ್ಲ. ಟಿಪ್ಪು ಸುಲ್ತಾನ್ ಕುರಿತಾಗಿ ಇದ್ದ ಒಂದು ಪುಟದ ಪಠ್ಯವನ್ನು ಆರು ಪುಟಕ್ಕೆ ವಿಸ್ತರಣೆ ಮಾಡಿದರು. ಒಂದು ಸಮುದಾಯವನ್ನು ಓಲೈಸಲು ಹೀಗೆ ಮಾಡಿದರು.

ಆಗ ಈ ಬಗ್ಗೆ ಯಾರೂ ಮಾತನಾಡಲಿಲ್ಲ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.

Exit mobile version