ಬಾಯಲ್ಲಿನ ಎಂಜಲು ನಮಗೆಷ್ಟು ಮುಖ್ಯ ಗೊತ್ತಾ? ಈ ಕುತೂಹಲಕಾರಿ ಮಾಹಿತಿ ಓದಿ!

human

ಎಂಜಲನ್ನು ಎಲ್ಲರೂ ಕೀಳಾಗಿ ಕಾಣ್ತಾರೆ. ಜೊಲ್ಲು, ಎಂಜಲು, ಉಗುಳು ಅಂತೆಲ್ಲ ಕರೆಸಿಕೊಳ್ಳೋ ಲಾಲಾರಸ ಅದೆಷ್ಟು ಮುಖ್ಯ ಅನ್ನೋದ್ರ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ ತಪ್ಪದೇ ಓದಿ. ತಿಂದದ್ದು ಕರಗಲು ಲಾಲಾರಸ ಅಗತ್ಯ. ಆಹಾರ ಅಗಿಯಲು, ಅಗಿದಿದ್ದು ಮುದ್ದೆಯನ್ನಾಗಿಸಿ ಜಠರಕ್ಕೆ ಸೇರಿಸಲು ಈ ರಸ ಅತೀ ಮುಖ್ಯ ಪಾತ್ರವಹಸುತ್ತದೆ.

ಮಾತನಾಡೋಕೂ ಇದು ಬೇಕೇ ಬೇಕು. ಇನ್ನು ಲಾಲಾರಸ ಇಲ್ಲದೇ ಇದ್ರೆ ನೀವು ತಿನ್ನುವ ಆಹಾರದ ರುಚಿಯೂ ನಿಮ್ಗೆ ತಿಳಿಯುವುದೇ ಇಲ್ಲ. ಯಾಕಂದ್ರೆ ಸೇವಿಸಿದ ಆಹಾರದಲ್ಲಿರುವ ರಾಸಾಯನಿಕ ವಸ್ತುಗಳು ಜೊಲ್ಲಿನೊಂದಿಗೆ ಬೆರೆತು ಕರಗಿದಾಗಷ್ಟೇ ಅದರ ರುಚಿ ನಮಗೆ ಅರಿವಾಗುತ್ತೆ. ಈ ಅತ್ಯುಪಯುಕ್ತ ಜೊಲ್ಲು ರಸ (Saliva) ಕೆಲವೊಮ್ಮೆ ನಿಗದಿತ ಪ್ರಮಾಣದಲ್ಲಿ ಉತ್ಪತ್ತಿಯಾಗದಿದ್ದಾಗ ಕೆಲವು ಸಮಸ್ಯೆಗಳು ಉದ್ಭವಿಸುತ್ತವೆ. ಇಂಥ ಸ್ಥಿತಿಯನ್ನು ‘ಕ್ಸೆರೋಸ್ಟೋಮಿಯಾ’ ಅಂತಾರೆ. ಇದು ಬಾಯಿಯ ದುರ್ವಾಸನೆಗೆ ಕಾರಣವಾಗುವುದಲ್ಲದೇ, ಆಹಾರ ಸೇವಿಸಲು, ಮಾತನಾಡಲೂ ಕಷ್ಟವಾಗುವಂತೆ ಮಾಡುತ್ತದೆ.

ಅಲ್ಲದೆ, ಹಲ್ಲುಗಳಲ್ಲಿ ಕುಳಿಗಳು ಹಾಗೂ ಬಾಯಿ ಸೋಂಕನ್ನೂ ಉಂಟುಮಾಡಬಲ್ಲದು. ನಮ್ಮ ಬಾಯಲ್ಲಿ 3 ಜೋಡಿ ಲಾಲಾರಸ ಗ್ರಂಥಿಗಳಿವೆ. ಕುತ್ತಿಗೆಯ ಮೇಲ್ಭಾಗದಲ್ಲಿ, ಎರಡೂ ಕಿವಿಗಳ ಕೆಳಭಾಗದಲ್ಲಿ ಇರುವ ಪ್ಯಾರೋಟಿಡ್ ಗ್ರಂಥಿ ಅತಿ ದೊಡ್ಡದು. ಇನ್ನೆರಡು ಜೋಡಿ ಕ್ರಮವಾಗಿ, ನಾಲಗೆಯ ಕೆಳಭಾಗದಲ್ಲಿ (ಸಬ್‌ಲಿಂಗ್ಯುವಲ್ ಗ್ರಂಥಿ), ಗಲ್ಲ ಹಾಗೂ ಕುತ್ತಿಗೆಯ ನಡುವೆ (ಸಬ್‌ಮ್ಯಾಂಡಿಬುಲರ್ ಗ್ರಂಥಿ) ಇರುತ್ತವೆ.

ಎಲ್ಲವನ್ನೂ ಒಟ್ಟಾರೆಯಾಗಿ ಸಲೈವರಿ ಗ್ರಂಥಿ ಎನ್ನುತ್ತಾರೆ. ಈ ಗ್ರಂಥಿಯಲ್ಲಿ ಲಾಲಾರಸ ಉತ್ಪತ್ತಿಯಾಗೋದು ಕಡಿಮೆಯಾದಾಗ ರುಚಿ ಗೊತ್ತಾಗೋಲ್ಲ. ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆ ಸೂಕ್ತ ಚಿಕಿತ್ಸೆಯೂ ಇದೆ, ಸರಿಯಾದ ಸಮಯಕ್ಕೆ ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಂಡ್ರೆ ಪರಿಹಾರವಾಗದ ಸಮಸ್ಯೆ ಯಾವುದೂ ಇಲ್ಲ ಅಲ್ವಾ?

Exit mobile version