ನಾಗಚೈತನ್ಯ ಸಮಂತಾ ಅಕ್ಕಿನೇನಿ ದಾಂಪತ್ಯದಲ್ಲಿ ಬಿರುಕು, ವಿಚ್ಚೇದನಕ್ಕೆ ಮುಂದಾದ ಸ್ಟಾರ್ ಜೋಡಿ

ಹೈದರಾಬಾದ್  ಅ 02 : ಟಾಲಿವುಡ್ ಸ್ಟಾರ್ ದಂಪತಿ ನಾಗಚೈತನ್ಯ ಹಾಗೂ ಸಮಂತಾ ಅಕ್ಕಿನೇನಿ ವಿಚ್ಛೇದನ ಪಡೆಯುತ್ತಿರುವುದು ಖಚಿತವಾಗಿದೆ. ಇಂದು ಇನ್‌ಸ್ಟಾಗ್ರಾಂನಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಸಮಂತಾ, ಪತಿ ನಾಗಚೈತನ್ಯ ಅವರಿಂದ ದೂರ ಆಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ನಾಗಚೈತನ್ಯ ಹಾಗೂ ಸಮಂತಾ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಈ ದಂಪತಿ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿತ್ತು. ಆದರೆ, ವಿಚ್ಛೇದನದ ವದಂತಿ ಬಗ್ಗೆ ಈ ಜೋಡಿ ಇದುವರೆಗೆ ಯಾವುದೇ ಸುಳಿವು ಬಿಟ್ಟು ಕೊಟ್ಟಿರಲಿಲ್ಲ. ಇದೀಗ ಎಲ್ಲಾ ಉಹಾಪೋಹಗಳಿಗೆ ತೆರೆ ಬಿದ್ದಿದ್ದು, ಪತಿ ನಾಗಚೈತನ್ಯ ಅವರಿಂದ ದೂರ ಆಗುತ್ತಿರುವುದಾಗಿ ಸಮಂತಾ ಹೇಳಿದ್ದಾರೆ

ಇಂದು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಈ ವಿಚಾರವನ್ನು ಹಂಚಿಕೊಂಡಿರುವ ಸಮಂತಾ, ಸಾಕಷ್ಟು ಸಮಾಲೋಚನೆ ನಂತರ ನಾನು ಹಾಗೂ ನಾಗಚೈತನ್ಯ ಸತಿ-ಪತಿಯ ಸಂಬಂಧವನ್ನು ಕಡಿದುಕೊಳ್ಳುತ್ತಿದ್ದೇವೆ ಎಂದಿದ್ದಾರೆ. ಅಭಿಮಾನಿಗಳು, ಆಪ್ತರು ಹಾಗೂ ಮಾಧ್ಯಮದವರಲ್ಲಿ ಮನವಿ ಮಾಡಿರುವ ಸಮಂತಾ, ನಮ್ಮ ಖಾಸಗಿತನ ಗೌರವಿಸಿ ನಾವು ಬೇರೆಯಾಗಲೇಬೇಕಾಗಿದೆ ಇಂತಹ ಕಷ್ಟದ ಸಂದರ್ಭದಲ್ಲಿ ನಮ್ಮ ಜೊತೆ ಸಹಕರಿಸಿ, ಎಂದು ಮನವಿ ಮಾಡಿದ್ದಾರೆ.  10 ವರ್ಷಗಳ ಪ್ರೀತಿ 4ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಹೊಸ್ತಿಲಲ್ಲಿ ಮುರಿದು ಬಿದ್ದಿದೆ. 2 ತಿಂಗಳುಗಳ ಹಿಂದೆಯೇ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೆಸರಿನೊಂದಿಗೆ ಇದ್ದ ಅಕ್ಕಿನೇನಿ ಫ್ಯಾಮಿಲಿ ಹೆಸರನ್ನು ಕೈ ಬಿಟ್ಟಿದ್ದರು.

Exit mobile version