ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಶಾಕಿಂಗ್‌ ನ್ಯೂಸ್‌ ! ಕನ್ನಡದ ಬಹುಬೇಡಿಕೆಯ ಡೈಲಾಗ್ ರೈಟರ್ ಗುರು ಕಶ್ಯಪ್ ನಿಧನ

ಪುಷ್ಪಕ ವಿಮಾನ’, ‘ಸುಂದರಾಂಗ ಜಾಣ’, ‘ದೇವಕಿ’ ಮುಂತಾದ ಅನೇಕ ಚಿತ್ರಗಳಿಗೆ ಸಂಭಾಷಣೆ ಬರೆದು ಸೈ ಎನಿಸಿಕೊಂಡಿದ್ದ ಪ್ರತಿಭಾವಂತ ಬರಹಗಾರ ಗುರು ಕಶ್ಯಪ್​ ಅವರು ಹೃದಯಾಘಾತದಿಂದ ಕೊನೆಯುಸಿರು ಎಳೆದಿದ್ದಾರೆ. ಸೋಮವಾರ (ಸೆ.13) ರಾತ್ರಿ ಅವರು ಇಹಲೋಕ ತ್ಯಜಿಸಿದರು.

ಕನ್ನಡದ ಪ್ರತಿಭಾವಂತ ಸಂಭಾಷಣಾಕಾರ, ಹಲವು ಸಿನಿಮಾಗಳಿಗೆ ಸಂಭಾಷಣೆ ಬರೆದಿದ್ದ ಗುರು ಕಶ್ಯಪ್​ ಅವರು ಸೋಮವಾರ (ಸೆ.13) ರಾತ್ರಿ ನಿಧನರಾದರು. ಹೃದಯಾಘಾತದಿಂದ ಅವರು ಮೃತಪಟ್ಟರು ಎಂಬ ಮಾಹಿತಿ ಸಿಕ್ಕಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದರು ಎನ್ನಲಾಗುತ್ತಿದೆ.  ಗಣೇಶ್​ ಅಭಿನಯದ ‘ಸುಂದರಾಂಗ ಜಾಣ’, ರಮೇಶ್​ ಅರವಿಂದ್​ ನಟನೆಯ ‘ಪುಷ್ಪಕ ವಿಮಾನ’, ಪ್ರಿಯಾಂಕಾ ಉಪೇಂದ್ರ ಅಭಿನಯದ ‘ದೇವಕಿ’ ಮುಂತಾದ ಸಿನಿಮಾಗಳಿಗೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದರು. ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಹಲವರು ಕಂಬನಿ ಮಿಡಿಯುತ್ತಿದ್ದಾರೆ.

            ಗುರು ಕಶ್ಯಪ್​ ನಿಧನಕ್ಕೆ ಕನ್ನಡ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ. ‘ಗುರು ದೇವರಂಥ ಮನುಷ್ಯ ಆಗಿದ್ದರು. ಅತ್ಯುತ್ತಮ ಸಂಭಾಷಣಕಾರನನ್ನು ಚಂದನವನ ಇಂದು ಕಳೆದುಕೊಂಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ‘ಪುಷ್ಪಕ ವಿಮಾನ’ ನಿರ್ದೇಶಕ ರವೀಂದ್ರನಾಥ್​ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

15ಕ್ಕೂ ಹೆಚ್ಚು ಸಿನಿಮಾಗಳಿಗೆ ಗುರು ಕಶ್ಯಪ್​ ಕೆಲಸ ಮಾಡಿದ್ದರು. ಅವರಿಗೆ 45 ವರ್ಷ ವಯಸ್ಸಾಗಿತ್ತು. ನಿಧನಕ್ಕೂ ಮುನ್ನ ಅನೇಕ ಪ್ರಾಜೆಕ್ಟ್​ಗಳಲ್ಲಿ ತೊಡಗಿಕೊಂಡಿದ್ದರು. ಡಾಲಿ ಧನಂಜಯ ನಟನೆಯ ‘ಮಾನ್ಸೂನ್​ ರಾಗ’, ಶಿವರಾಜ್​ಕುಮಾರ್​ ಅಭಿನಯದ ‘ಬೈರಾಗಿ’, ‘ವ್ಹೀಲ್​ ಚೇರ್​ ರೋಮಿಯೋ’ ಮುಂತಾದ ಸಿನಿಮಾಗಳಿಗೆ ಅವರು ಡೈಲಾಗ್​ ಬರೆಯುತ್ತಿದ್ದರು. ಆ ಸಿನಿಮಾಗಳು ತೆರೆಕಾಣುವುದಕ್ಕೂ ಮುನ್ನವೇ ಅವರು ನಿಧನರಾಗಿದ್ದಾರೆ. ಪತ್ನಿ ಮತ್ತು ಮಗಳನ್ನು ಗುರು ಕಶ್ಯಪ್​ ಅಗಲಿದ್ದಾರೆ.

‘ಇದು ನಿಜಕ್ಕೂ ಶಾಕಿಂಗ್​. ಈ ಸತ್ಯವನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ಸದಾ ತಾಳ್ಮೆಯಿಂದ ನನ್ನ ಕಥೆಗಳನ್ನು ಕೇಳಿ, ಅವುಗಳಿಗೆ ಮೆಚ್ಚುಗೆ ಸೂಚಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಬರಹಗಳ ಫಸ್ಟ್​ ಡ್ರಾಫ್ಟ್​ ಓದುವುದನ್ನು ಮಿಸ್​ ಮಾಡಿಕೊಳ್ಳುತ್ತೇನೆ ಸರ್​’ ಎಂದು ನಟಿ ಆರೋಹಿ ನಾರಾಯಣ್​ ಪೋಸ್ಟ್​ ಮಾಡಿದ್ದಾರೆ.

‘ಗುರು ಕಶ್ಯಪ್​ ತುಂಬ ಪ್ರತಿಭಾವಂತ ವ್ಯಕ್ತಿ ಆಗಿದ್ದರು. ಕೆಲವೇ ದಿನಗಳ ಹಿಂದೆ ಅವರ ಜೊತೆ ಕೆಲಸ ಮಾಡಿದ್ದೆ. ಒಂದೊಳ್ಳೆಯ ಪ್ರತಿಭೆಯನ್ನು ನಾವು ಕಳೆದುಕೊಂಡೆವು. ಇದು ಶಾಕಿಂಗ್​. ಈ ಸುದ್ದಿ ಕೇಳಲು ಬೇಸರ ಆಗುತ್ತಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಸಹೋದರನೇ’ ಎಂದು ‘ಶಿವಾಜಿ ಸುರತ್ಕಲ್​’ ನಿರ್ದೇಶಕ ಆಕಾಶ್​ ಶ್ರೀವತ್ಸ ಅವರು ಗುರು ಕಶ್ಯಪ್​ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Exit mobile version