ಸೌದಿ ಅರೇಬಿಯಾದ ಪುರುಷರು ವಿದೇಶಿ ಹುಡುಗಿಯನ್ನು ಮದುವೆಯಾಗಬೇಕಾದ್ರೆ ಈ ನಿಯಮಗಳನ್ನು ಪಾಲಿಸಬೇಕು!

ರಿಯಾದ್, ಮಾ. 22: ಇತ್ತೀಚೆಗಷ್ಟೇ ಸೌದಿ ಅರೇಬಿಯಾದ ಪುರುಷರು ಪಾಕಿಸ್ತಾನ, ಬಾಂಗ್ಲಾದೇಶ, ಚಡ್ ಹಾಗೂ ಮಯನ್ಮಾರ್​ನ ಮಹಿಳೆಯರನ್ನು ಮದುವೆ ಆಗಬಾರದು ಎಂದು ಆದೇಶ ಹೊರಡಿಸಿತ್ತು. ಆದರೆ ಇದೀಗ ಮದುವೆ ಆಗುವುದಾದರೆ ಕೆಲವೊಂದು ಷರತ್ತುಗಳನ್ನು ಪಾಲಿಸುವಂತೆ ಹೇಳಿದೆ. ಹೌದು, ವಿದೇಶದ ಹುಡುಗಿಯರನ್ನು ಮದುವೆ ಆಗಬೇಕಿದ್ದರೆ ವಿಶೇಷ ನಿಯಮಾವಳಿಗಳನ್ನು ಹಾಗೂ ಅನುಮತಿಯನ್ನು ಪಡೆಯಬೇಕು ಎಂಬ ಬಗ್ಗೆ ಡಾವ್ನ್ ವರದಿ ಮಾಡಿದೆ. ಈ ನಿರ್ಬಂಧದಿಂದ ವಿದೇಶಿ ಹುಡುಗಿಯರನ್ನು ಮದುವೆ ಆಗಲು ಇಚ್ಛಿಸುವ ಸೌದಿ ಅರೇಬಿಯಾ ಹುಡುಗರಿಗೆ ಸಂಕಷ್ಟದ ಸ್ಥಿತಿ ಎದುರಾಗಿದೆ.

ಪಾಕಿಸ್ತಾನ, ಬಾಂಗ್ಲಾದೇಶ, ಚಡ್ ಮತ್ತು ಮಯನ್ಮಾರ್​ನ ಹುಡುಗಿಯರನ್ನು ಮದುವೆ ಆಗಲು ಇಚ್ಛಿಸುವ ಹುಡುಗರು ಮೊದಲು ಸರ್ಕಾರದ ಅನುಮತಿ ಪಡೆಯಬೇಕು. ಅಧಿಕೃತವಾಗಿ ವಿವಾಹ ಅರ್ಜಿಯನ್ನು ದಾಖಲಿಸಬೇಕು ಎಂದು ಮಕ್ಕಾ ಪೊಲೀಸ್ ನಿರ್ದೇಶಕ ಮೇಜರ್ ಜನರಲ್ ಅಸ್ಸಾಫ್ ಅಲ್-ಖುರೇಶಿ ತಿಳಿಸಿದ್ದಾರೆ. ಜೊತೆಗೆ, ವಿಚ್ಛೇದನ ನೀಡಿರುವ ಪುರುಷರು ಆರು ತಿಂಗಳ ಒಳಗೆ ಮತ್ತೆ ಮದುವೆಗೆ ಅರ್ಜಿ ಸಲ್ಲಿಸುವಂತಿಲ್ಲ. ಅರ್ಜಿ ಸಲ್ಲಿಸುವ ಹುಡುಗರ ವಯೋಮಾನ 25 ದಾಟಿರಬೇಕು. ನಿಗದಿತ ದಾಖಲೆಗಳನ್ನು ಸ್ಥಳೀಯ ಜಿಲ್ಲಾ ಮೇಯರ್​ರ ಸಹಿಯೊಂದಿಗೆ ನೀಡಬೇಕು. ಫ್ಯಾಮಿಲಿ ಕಾರ್ಡ್​ನ್ನು ಕೂಡ ದಾಖಲೆಯಾಗಿ ಕೊಡಬೇಕು. ಅರ್ಜಿದಾರ ಈಗಾಗಲೇ ಮದುವೆ ಆಗಿದ್ದರೆ, ಆತನ ಮಡದಿ ಅನಾರೋಗ್ಯದಿಂದ ಇದ್ದಾಳೆ ಅಥವಾ ಬಂಜೆ ಎಂದು ಆಸ್ಪತ್ರೆಯಿಂದ ವರದಿ ಸಲ್ಲಿಸಬೇಕು ಎಂದೂ ಖುರೇಶಿ ಹೇಳಿದ್ದಾರೆ.

Exit mobile version