ಓವೈಸಿಗೆ ಗುಡ್ ಬೈ ಹೇಳಿ, ಮಮತಾ ಬ್ಯಾನರ್ಜಿಗೆ ಬೆಂಬಲ ನೀಡಿದ AIMIM ಬಂಗಾಳ ಘಟಕದ ಅಧ್ಯಕ್ಷ

ಕೊಲ್ಕತ್ತಾ, ಮಾ.20: ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ (AIMIM) ಪಕ್ಷದ ಪಶ್ಚಿಮ ಬಂಗಾಳ ರಾಜ್ಯ ಘಟಕದ ಮುಖ್ಯಸ್ಥ ಜಮಿರುಲ್ ಹಸನ್ ತಮ್ಮ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಎಐಎಂಐಎಂ ವರಿಷ್ಠ ಅಸಾದುದ್ದೀನ್ ಓವೈಸಿ ಬಿಜೆಪಿಗೆ ಸಹಕರಿಸುತ್ತಿದ್ದಾರೆಂದು ಆರೋಪ ಹೊಂದಿರುವುದರಿಂದ, ಇವರು ‘ಇಂಡಿಯನ್ ನ್ಯಾಷನಲ್ ಲೀಗ್​’ಗೆ ಸೇರಿರುವುದಾಗಿ ಶನಿವಾರ ತಿಳಿಸಿದ್ದಾರೆ. ಈ ಮೂಲಕ ಮಮತಾ ಬ್ಯಾನರ್ಜಿಗೆ ಬೆಂಬಲ ಒದಗಿಸುವುದಾಗಿ ಜಮಿರುಲ್ ಹಸನ್ ಘೋಷಿಸಿದ್ದಾರೆ.

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದ ಓವೈಸಿ ನೇತೃತ್ವದ ಎಐಎಂಐಎಂ ಇಡೀ ರಾಜ್ಯಾದ್ಯಂತ ಪಕ್ಷ ಸಂಘಟನೆ ನಡೆಸುತ್ತಿತ್ತು. ಬಂಗಾಳದ 20 ಜಿಲ್ಲೆಗಳಲ್ಲಿ ಈಗಾಗಲೇ ಒಂದು ಮಟ್ಟಿಗೆ ಗುರುತಿಸಿಕೊಂಡಿತ್ತು. ಇದರ ಹಿಂದೆ ರಾಜ್ಯ ಘಟಕದ ಅಧ್ಯಕ್ಷ ಜಮಿರುಲ್ ಹಸನ್ ಅವರ ಅಪಾರ ಶ್ರಮವಿತ್ತು. ಆದರೆ ಜಮಿರುಲ್ ಹಸನ್ ಚುನಾವಣೆಗೆ ಇನ್ನೇನು ಒಂದೇ ವಾರ ಇರುವಾಗ ಪಕ್ಷಕ್ಕೆ ಗುಡ್ ಬೈ ಹೇಳಿರುವುದು ಎಐಎಂಐಎಂಗೆ ಭಾರಿ ಹೊಡೆತ ಬಿದ್ದಂತಾಗಿದೆ.

‘ನಂದಿಗ್ರಾಮ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿಗೆ ಬೆಂಬಲಿಸಿ ಗೆಲ್ಲಿಸುತ್ತೇವೆ. ಬಿಜೆಪಿಯ ಸುವೇಂದು ಅಧಿಕಾರಿಗೆ ಮಣ್ಣು ಮುಕ್ಕಿಸುತ್ತೇವೆ. ಅಲ್ಲದೇ, ಉಳಿದ ಎಲ್ಲಾ ಕ್ಷೇತ್ರಗಳಲ್ಲೂ ಟಿಎಂಸಿ ಅಭ್ಯರ್ಥಿಗಳನ್ನು ಬೆಂಬಲಿಸುತ್ತೇವೆ. ನಮ್ಮ ಬೆಂಬಲ ಟಿಎಂಸಿಗೆ ಗೆಲುವು ತಂದುಕೊಡಲಿದೆ. ಏಕೆಂದರೆ ಎಐಎಂಐಎಂಯ ಶೇ 95ರಷ್ಟು ಕಾರ್ಯಕರ್ತರು ನನ್ನ ಕೈಯಲ್ಲಿದ್ದಾರೆ’ ಎಂದಿದ್ದಾರೆ.

Exit mobile version