ವಿದ್ಯಾರ್ಥಿಗಳನ್ನ ಕಾರ್ಮಿಕರಂತೆ ಬಳಕೆ ಮಾಡಿಕೊಂಡ ಕೋಲಾರ ಪ್ರೌಢಶಾಲೆ ಸಿಬ್ಬಂದಿಗಳು

Kolar: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಯಾವುದೇ ಕೆಲಸಕ್ಕೂ ಬಳಸುವಂತಿಲ್ಲ ಎಂದು ಶಿಕ್ಷಣ ಇಲಾಖೆ ಪದೇ ಪದೇ ಸಾರುತ್ತಿದ್ದರೂ ಕೂಡಾ ಶೌಚಾಲಯಗಳನ್ನು ಮಕ್ಕಳಿಂದ ಶುಚಿಗೊಳಿಸುವುದು, ಜೊತೆಗೆ ಶಿಕ್ಷಕರ ಸ್ವಂತ ಕೆಲಸಕ್ಕೆ ಬಳಸುವ ಪ್ರಕರಣಗಳು ಈಗೀಗ ಹೆಚ್ಚಾಗಿ ನಡೆಯುತ್ತಿವೆ. ಇದೀಗ ಕೋಲಾರ (Kolar) ನಗರದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಅಮಾನವೀಯ ಘಟನೆ ನಡೆದಿದ್ದು, ಶಾಲಾ ಸಿಬ್ಬಂದಿಗಳು ಎಸ್​ಎಸ್​ಎಲ್​ಸಿ (SSLC) ವಿದ್ಯಾರ್ಥಿಗಳನ್ನು ಕೂಲಿ ಕಾರ್ಮಿಕರ ರೀತಿ ಬಳಕೆ ಮಾಡಿಕೊಂಡ ಘಟನೆ ನಡೆದಿದೆ.ಜೊತೆಗೆ ಮಕ್ಕಳು ಕಷ್ಟ ಪಟ್ಟು ಮಣ್ಣು ಹೊರುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೋಲಾರ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯ ಹತ್ತಿರದಲ್ಲೇ ಈ ಶಾಲೆ ಇದ್ದರೂ, ಶಾಲಾ ಸಮಯದಲ್ಲಿಯೇ ಮಕ್ಕಳಿಂದ ಗೋಡೆ ಮತ್ತು ಕಲ್ಲು ಒಡೆಸುವುದು. ಮಣ್ಣು ಎತ್ತುವ ಕೆಲಸ ಮಾಡಿಸಿಕೊಳ್ಳುತ್ತಿರುವ ಕುರಿತು ವರದಿಯಾಗಿದೆ. ಇನ್ನು ಕೆಲಸ ಮಾಡದಿದ್ರೆ ವಿದ್ಯಾರ್ಥಿಗಳನ್ನು (Students) ಥಳಿಸುತ್ತಾರೆ ಎನ್ನುವ ಆರೋಪ ಶಾಲೆಯ ಉಪ ಪ್ರಾಂಶುಪಾಲ ರಾಧಮ್ಮ (Radhamma) ವಿರುದ್ಧ ಕೇಳಿಬಂದಿದೆ.

ಪರೀಕ್ಷೆ ಸಮಯದಲ್ಲಿ ಬೋಧನೆ ಮಾಡುವುದು ಬಿಟ್ಟು, ಕೂಲಿ ಕಾರ್ಮಿಕರ ರೀತಿ ಮಕ್ಕಳನ್ನ ಬಳಸಿಕೊಳ್ಳುತ್ತಿದ್ದು, ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಶಾಲೆಯ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಹಾಗೂ ರಾಜ್ಯ ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ.

ಇನ್ನು ರಾಜ್ಯದಲ್ಲಿ ಇಂತಹ ಘಟನೆಗಳು ಇದೇ ಮೊದಲೇನಲ್ಲ. ಈ ಹಿಂದೆ ಶೌಚಾಲಯ ಸ್ವಚ್ಚಗೊಳಿಸಿದ್ದು. ಸ್ವಂತ ಮನೆಯ ಕೆಲಸ ಮಾಡಿಸಿಕೊಂಡಿದ್ದು. ಸ್ವಂತ ಕಾರ್ ತೊಳೆಸಿದ್ದು ಹೀಗೆ ಹತ್ತು ಹಲವಾರು ಪ್ರಕರಣದ ಕುರಿತು ವರದಿಯಾಗಿದ್ದರೂ ಇದಕ್ಕೆ ಬ್ರೇಕ್​ ಹಾಕಲಾಗುತ್ತಿಲ್ಲ. ಎಂದು ವಿಧ್ಯಾರ್ಥಿಗಳ ಪೋಷಕರು ಸರ್ಕಾರದ ವಿರುದ್ಧ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರ ಮೇಲೆ ಕಿಡಿಕಾರಿದ್ದಾರೆ. ಮುಂದಿನ ದಿನಗಳಲ್ಲಿ ಇದು ಮತ್ತೆ ಪುನರಾವರ್ತಿತಗೊಂಡರೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಕಚೇರಿಯ ಮುಂದೆ ಧರಣಿ ನಡೆಸಲಾಗುವುದು ಎಂದು ಪೋಷಕರು ಪಟ್ಟು ಹಿಡಿದಿದ್ದಾರೆ.

Exit mobile version