ಪ್ರತ್ಯೇಕ ಪ್ರಕರಣ: ಕಾಳಸಂತೆಯಲ್ಲಿ ರೆಮ್‌ಡಿಸಿವಿರ್ ಮಾರಾಟ ಮಾಡುತ್ತಿದ್ದ ಐವರ ಸೆರೆ

ಮೈಸೂರು, ಮೇ. 13: ರಾಜ್ಯದಲ್ಲಿ ರೆಮ್‌ಡಿಸಿವಿರ್ ಮದ್ದು ಕೊರತೆ ಕೇಳಿ ಬರುತ್ತಿರುವ ಬೆನ್ನಲ್ಲೇ ಕಾಳಸಂತೆಯಲ್ಲಿ ರೆಮ್‌ಡಿಸಿವಿರ್ ಮಾರಾಟ ಮಾಡುತ್ತಿದ್ದ ಎರಡು ಜಾಲಗಳನ್ನು ಪತ್ತೆ ಮಾಡಿರುವ ಮೈಸೂರು ಸಿಸಿಬಿ ಪೊಲೀಸರು, ಐವರನ್ನು ಬಂಧಿಸಿದ್ದಾರೆ.

ಜೆಪಿನಗರದ ಕಾಮಾಕ್ಷಿ ಆಸ್ಪತ್ರೆಯ ಸ್ಟಾಫ್ ನರ್ಸ್ ಜಿ.ಸುರೇಶ್ (27), ಕೆ.ಆರ್. ಆಸ್ಪತ್ರೆ ಇನ್‌ಸ್ಟಿಟ್ಯೂಟ್ ಆಫ್ ನೆಪ್ರೋ ನ್ಯೂರೋ ಸ್ಟಾಫ್ ನರ್ಸ್ ಡಿ.ಎಂ. ರಾಘವೇಂದ್ರ(27), ಕೆ.ಆರ್. ಆಸ್ಪತ್ರೆ ಸ್ಟಾಫ್ ನರ್ಸ್ ಅಶೋಕ (31), ವಿಶ್ವೇಶ್ವರ ನಗರದ ಗಿರೀಶ್ ಚಂದ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ (ಜಿಸಿಎಸ್) ಸ್ಟಾಪ್ ನರ್ಸ್‌ಗಳಾದ ಕೆ.ರಾಜೇಶ್(20), ಡಿ.ವಿ.ಮಲ್ಲೇಶ್ (20) ಬಂಧಿತ ಆರೋಪಿಗಳು.

ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ಉಲ್ಭಣಗೊಳ್ಳುತ್ತಿದ್ದು, ಸರ್ಕಾರದ ವತಿಯಿಂದ ನೇರವಾಗಿ ಆಸ್ಪತ್ರೆಗಳ ಮೂಲಕ ರೋಗಿಗಳಿಗೆ ನೀಡುತ್ತಿದ್ದ ರೆಮಿಡಿಸಿವರ್ ಔಷಧವನ್ನು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಬಗ್ಗೆ ಪತ್ತೆ ಮಾಡಲು ಮೈಸೂರು ನಗರದ ಪೊಲೀಸ್ ಆಯುಕ್ತರು ಸಿ.ಸಿ.ಬಿ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿಶೇಷ ತಂಡವನ್ನು ರಚಿಸಿದ್ದರು. ಈ ವಿಶೇಷ ತಂಡವು ಮಾಹಿತಿ ಮೇರೆಗೆ ಮೇ 12ರಂದು ಕಾರ್ಯಾಚರಣೆ ನಡೆಸಿ ಈ ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಆರೋಪಿಗಳ ಬಳಿಯಿದ್ದ 4 ಕೋವಿ ಫಾರ್(ರೆಮಿಡಿಸಿವರ್ 100 ಎಂಜಿ/20 ಎಂಎಲ್) ಇಂಜೆಕ್ಷನ್‌ಗಳು ಹಾಗೂ ಇಂಜೆಕ್ಷನ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ, ಸಂಪಾದಿಸಿದ್ದ 7,000 ರೂ. ವಶಪಡಿಸಿಕೊಂಡಿರುತ್ತಾರೆ. ಈ ಸಂಬಂಧ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಂತೆಯೇ, ಮತ್ತೊಂದು ಪ್ರಕರಣದಲ್ಲಿ ಸಿಸಿಬಿ ಪೊಲೀಸರು ನಗರದ ಗಾಂಧಿನಗರದಲ್ಲಿರುವ ವೃದ್ಧಾಶ್ರಮದ ಮುಂಭಾಗ ಕೆ.ರಾಜೇಶ್ ಮತ್ತು ಮಲ್ಲೇಶ್ ಅವರನ್ನು ವಶಕ್ಕೆ ಪಡೆದಿದ್ದು, ಇವರು ಮೈಸೂರಿನ ವಿಶ್ವೇಶ್ವರನಗರದಲ್ಲಿರುವ ಗಿರೀಶ್‌ಚಂದ್ರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ (ಜಿಸಿಎಸ್)ನಲ್ಲಿ ಸ್ಟಾಫ್ ನರ್ಸ್‌ಗಳಾಗಿದ್ದು, ಆಸ್ಪತ್ರೆಯ ಕೋವಿಡ್-19 ಸೋಂಕಿತ ರೋಗಿಗಳಿಗೆ ನೀಡಲು ಕೊಟ್ಟಿದ್ದ 6 ರೆಮಿಡಿಸಿವರ್ ಇಂಜೆಕ್ಷನ್‌ಗಳನ್ನು ರೋಗಿಗಳಿಗೆ ನೀಡದೇ ತೆಗೆದುಕೊಂಡು ಬಂದು ಅವುಗಳನ್ನು ಹೆಚ್ಚಿನ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Exit mobile version