ವಿದೇಶಕ್ಕೆ ಲಸಿಕೆ ಕಳುಹಿಸಲು ಅನುಮತಿ ಕೇಳಿದ ಸೆರಮ್​; ದೇಶದಲ್ಲೇ ಕೊರತೆ ಇದೆ, ರಫ್ತು ಸಾಧ್ಯವಿಲ್ಲ ಎಂದ ಭಾರತ ಸರ್ಕಾರ

ನವದೆಹಲಿ, ಮೇ. 11: ದೇಶದಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ವೈದ್ಯಕೀಯ ವ್ಯವಸ್ಥೆಯ ತಳಪಾಯವೇ ಅಲುಗಾಡುವಂತಾಗಿದ್ದು, ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಬೇಕಾದ ಬಹುತೇಕ ಸೌಲಭ್ಯಗಳಲ್ಲಿ ಅಭಾವ ಕಾಣಿಸಿಕೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾ ನಿಯಂತ್ರಿಸಲು ಲಸಿಕೆಯೊಂದೇ ಪರಿಣಾಮಕಾರಿ ಮಾರ್ಗ ಎಂಬ ಅಭಿಪ್ರಾಯವನ್ನು ತಜ್ಞರು ಕೂಡಾ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ದುರದೃಷ್ಟವಶಾತ್ ಇಷ್ಟು ದಿನ ಬೇರೆ ದೇಶಗಳಿಗೆ ಲಸಿಕೆ ಪೂರೈಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತದಲ್ಲೇ ಈಗ ಲಸಿಕೆ ಕೊರತೆ ಕಾಣಿಸಿಕೊಂಡಿದೆ. ಈ ಕಾರಣದಿಂದ ಭಾರತ ಸರ್ಕಾರ ಈಗ ಲಸಿಕೆ ರಫ್ತು ಮಾಡುವುದಕ್ಕೆ ತಯಾರಿಕಾ ಸಂಸ್ಥೆಗಳಿಗೆ ಅನುಮತಿ ನಿರಾಕರಿಸಿದ್ದು, ದೇಶದಲ್ಲಿ ಲಸಿಕೆ ಕೊರತೆ ಎದುರಾಗಿರುವ ಹಿನ್ನೆಲೆ ಬೇರೆಡೆಗೆ ಕಳುಹಿಸುವುದು ಸಾಧ್ಯವಿಲ್ಲ ಎಂದು ತಿಳಿಸಿದೆ.

ಇಂಗ್ಲೆಂಡ್​ಗೆ 50 ಲಕ್ಷ ಡೋಸ್ ಲಸಿಕೆ ರಫ್ತು ಮಾಡಲು ಸೆರಮ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ ಮನವಿ ಮಾಡಿದ ಬೆನ್ನಲ್ಲೇ ಅದನ್ನು ನಿರಾಕರಣೆ ಮಾಡಿದ ಕೇಂದ್ರ ಸರ್ಕಾರ ಭಾರತದಲ್ಲಿ ಲಸಿಕೆ ಕೊರತೆ ಹಿನ್ನೆಲೆ ರಫ್ತುಗೆ ಅನುಮತಿ ಇಲ್ಲ ಎಂದಿದೆ. ಸದ್ಯ ದೇಶದ ಹಲವು ರಾಜ್ಯಗಳಲ್ಲಿ ಎರಡನೇ ಡೋಸ್ ಲಸಿಕೆ ಪೂರೈಸುವುದಕ್ಕೂ ಸಮಸ್ಯೆ ತಲೆದೋರಿದ್ದು, 18 ರಿಂದ 44 ವರ್ಷ ವಯೋಮಾನದವರಿಗೆ ಲಸಿಕೆ ನೀಡುವ ಕಾರ್ಯಕ್ರಮವೂ ವಿಳಂಬವಾಗುತ್ತಿದೆ. ಹೀಗಾಗಿ ರಫ್ತು ಮಾಡುವುದನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ.

Exit mobile version