‘ಕಾಂಗ್ರೆಸ್ ಇಲ್ಲದೇ ತೃತೀಯ ರಂಗ ಸಾಧ್ಯವಿಲ್ಲ’ ಶರದ್ ಪವಾರ್ ಹೇಳಿಕೆ ಹಿಂದೆ ಹೊಸ ಲೆಕ್ಕಾಚಾರ!

sharad pawar

2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ(Loksabha Election ) ತೆರೆಮರೆಯಲ್ಲಿ ತಯಾರಿ ಶುರುವಾಗಿದೆ. ಅನೇಕ ಪ್ರಾದೇಶಿಕ ಪಕ್ಷಗಳು ಬಿಜೆಪಿಯನ್ನು(BJP) ಸೋಲಿಸುವ ನಿಟ್ಟಿನಲ್ಲಿ ಅನೇಕ ರಣತಂತ್ರಗಳನ್ನು ರೂಪಿಸುತ್ತಿವೆ. ಮೋದಿ ಸರ್ಕಾರವನ್ನು(Modi Government) ಕೆಳಗಿಳಿಸುವ ನಿಟ್ಟಿನಲ್ಲಿ ಪ್ರಾದೇಶಿಕ ಶಕ್ತಿಗಳ ಒಕ್ಕೂಟವನ್ನು ರಚಿಸುವ ಕಸರತ್ತು ಶುರುವಾಗಿದೆ. ಮಮತಾ ಬ್ಯಾನರ್ಜಿ(Mamata Banerjee) ಮತ್ತು ಶರದ್ ಪವಾರ್(Sharad Pawar) ತೃತೀಯ ರಂಗದ ಮೂಲಕ ಪ್ರಧಾನಿ ಗದ್ದುಗೆ ಏರುವ ತಂತ್ರ ರೂಪಿಸುತ್ತಿದ್ದಾರೆ.

2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗವನ್ನು ಕಟ್ಟಬೇಕು, ಆ ಮೂಲಕ ಪ್ರಾದೇಶಿಕ ಶಕ್ತಿಗಳು ಒಂದುಗೂಡಬೇಕೆಂದು ದೇವೇಗೌಡರ ಆದಿಯಾಗಿ ಅನೇಕ ನಾಯಕರು ಕನಸು ಕಂಡಿದ್ದರು. ಕೆಲ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಮೈತ್ರಿಕೊಂಡು ಚುನಾವಣೆ ಎದುರಿಸಿದ್ದವು. ಆದರೆ ಪ್ರಾದೇಶಿಕ ಪಕ್ಷಗಳ ಮೈತ್ರಿ ನಿರೀಕ್ಷಿತ ಫಲಿತಾಂಶ ನೀಡುವಲ್ಲಿ ವಿಫಲವಾಗಿತ್ತು. ಆದರೆ ಈ ಬಾರಿ ಕೊನೆಯ ಹಂತದಲ್ಲಿ ಪ್ರಯತ್ನಕ್ಕೆ ಕೈಹಾಕದೇ, ಮೊದಲೇ ಮೈತ್ರಿಕೂಟವನ್ನು ರಚಿಸಿ ಮತ್ತು ಮೈತ್ರಿ ಸೂತ್ರಗಳನ್ನು ಸಿದ್ದಪಡಿಸಿಕೊಂಡರೆ ಮೈತ್ರಿಕೂಟವನ್ನು ಸುಲಭವಾಗಿ ರಚಿಸಬಹುದು ಎಂಬುದು ಎನ್‍ಸಿಪಿ ನಾಯಕ ಶರದ್ ಪವಾರ್ ಲೆಕ್ಕಾಚಾರ.

ಹೀಗಾಗಿಯೇ ಶರದ್ ಪವಾರ್ ಪ್ರಾದೇಶಿಕ ಪಕ್ಷಗಳ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸುತ್ತಿದ್ದಾರೆ. ಕಳೆದ ಬಾರಿ ತೃತೀಯ ರಂಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜಾಗವಿರಲಿಲ್ಲ. ಆದರೆ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಕೂಡಾ ತೃತೀಯ ರಂಗದಲ್ಲಿ ಸೇರಿಸಿಕೊಳ್ಳುವ ಬಗ್ಗೆ ಶರದ್ ಪವಾರ್ ಹೆಚ್ಚು ಉತ್ಸುಕರಾಗಿದ್ದಾರೆ. ಕಾಂಗ್ರೆಸ್ ಪಕ್ಷ ದೇಶದ ಅನೇಕ ರಾಜ್ಯಗಳಲ್ಲಿ ತನ್ನದೇ ಆದ ನೆಲೆ ಹೊಂದಿದೆ. ಆದರೆ ಗೆಲ್ಲುವ ಶಕ್ತಿ ಕಳೆದುಕೊಂಡಿದೆ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಬಳಸಿಕೊಂಡು ಚುನಾವಣೆ ಗೆಲ್ಲಬಹುದು ಎಂಬುದು ಪವಾರ್ ಲೆಕ್ಕಾಚಾರ.

ಇನ್ನು ಈ ಹಿಂದಿನಂತೆ ಕಾಂಗ್ರೆಸ್ ಪಕ್ಷ ತನಗೆ ಪ್ರಧಾನಿ ಹುದ್ದೆ ಬೇಕೆಂದು ಷರತ್ತು ಹಾಕುವ ಸ್ಥಿತಿಯಲ್ಲಿಲ್ಲ. ಪ್ರಾದೇಶಿಕ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರದ ಭಾಗವಾದರೆ ಪಕ್ಷ ಸಂಘಟನೆ ಮಾಡಬಹುದು. ತೃತೀಯ ರಂಗವನ್ನು ತೊರೆದರು ದೇಶದ ರಾಜಕೀಯದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ ಎಂಬುದು ಅನೇಕ ಹಿರಿಯ ಕಾಂಗ್ರೆಸ್ ನಾಯಕರ ಅಭಿಪ್ರಾಯ. ಸದ್ಯದ ಕಾಂಗ್ರೆಸ್ ಪಕ್ಷದ ಹೀನಾಯ ಸ್ಥಿತಿಯನ್ನು ಅರಿತಿರುವ ಶರದ್ ಪವಾರ್ ಕಾಂಗ್ರೆಸ್ ಪಕ್ಷವನ್ನು ತೃತೀಯ ರಂಗದಲ್ಲಿ ಸೇರಿಸಿಕೊಳ್ಳಲು ಚಿಂತನೆ ನಡೆಸಿದ್ದಾರೆ.

ಆ ಮೂಲಕ ಹೆಚ್ಚು ಸ್ಥಾನಗಳನ್ನು ಗಳಿಸಿ, ಪ್ರಧಾನಿ ಹುದ್ದೆಯ ಕನಸನ್ನು ಪವಾರ್ ಕಾಣುತ್ತಿದ್ದಾರೆ. ಹೀಗಾಗಿ “ಕಾಂಗ್ರೆಸ್ ಪಕ್ಷವಿಲ್ಲದೇ ತೃತೀಯ ರಂಗ ರಚನೆ ಅಸಾಧ್ಯ”ವೆಂದು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಆದರೆ ಪವಾರ್ ಮಾತಿಗೆ ಮಮತಾ ಬ್ಯಾನರ್ಜಿ ಮತ್ತು ಕೆ.ಸಿ ಚಂದ್ರಶೇಖರ್‍ರಾವ್ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Exit mobile version