ಶಿವಮೊಗ್ಗ ಸ್ಪೋಟ ಹಿನ್ನೆಲೆ: ಎಚ್ಚೆತ್ತ ಮಂಡ್ಯ ಜಿಲ್ಲಾಡಳಿತದಿಂದ ವಿವಿಧ ಕ್ರಷರ್ ಗಳ ಮೇಲೆ ದಾಳಿ

ಮಂಡ್ಯ, ಜ. 24: ಶಿವಮೊಗ್ಗದಲ್ಲಿ ಕ್ರಷರ್‌ಗೆ ಸಂಬಂಧಿಸಿದ ಸ್ಛೋಟಕದ ದುರ್ಘಟನೆಯಿಂದ ಎಚ್ಚೆತ್ತುಕೊಂಡಿರುವ ಮಂಡ್ಯ ಜಿಲ್ಲಾಡಳಿತ, ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಕ್ರಷರ್‌ಗಳ ಮೇಲೆ ದಾಳಿ ನಡೆಸಿ ಸ್ಛೋಟಕಗಳ ಬಗ್ಗೆ ಪರಿಶೀಲನೆ ನಡೆಸಿತು.

ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಶ್ರೀರಂಗಪಟ್ಟಣ ತಾಲ್ಲೂಕಿನ ಟಿ.ಎಂ.ಹೊಸೂರು ಹಾಗೂ ಕಾಳೇನಹಳ್ಳಿ ಸಮೀಪದ ಕ್ರಷರ್ ಗಳ ಮೇಲೆ ದಾಳಿ ನಡೆಸಿದ ತಹಸಿಲ್ದಾರ್ ಎಂ.ವಿ.ರೂಪಾ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಪುಷ್ಪಾ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೋಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ದಾಳಿ ನಡೆಸಿ ಹಲವು ಕಲ್ಲು ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ದಾಖಲೆ ಹಾಗೂ ಸ್ಛೋಟಕಗಳ ಬಗ್ಗೆ ಪರಿಶೀಲನೆ ನಡೆಸಿದರು. ಅನಧಿಕೃತವಾಗಿ ನಡೆಸುತ್ತಿದ್ದ ಆಶೀರ್ವಾದ್, ಅಪ್ಪಾಜಿಗೌಡ ಹಾಗೂ ಬಿ.ರೇವಣ್ಣ ಕ್ರಷರ್ ಸೇರಿಂತೆ ಒಟ್ಟು 7 ಕ್ರಷರ್‌ಗಳಿಗೆ ಬೀಗ ಜಡಿದಿದ್ದಾರೆ.

ರಾಮ್‌ದೇವ್ ಎಂಬುವರಿಗೆ ಸೇರಿದ ಜೆಜೆ ಕ್ರಷರ್‌ನಲ್ಲಿ ಸ್ಛೋಟಕಕ್ಕೆ ಬಳಸಲ್ಪಡುವ ಜಿಲೆಟಿನ್, 300 ಡಿಟೋರ್ನೇಟರ್ ಹಾಗೂ ಮೆಗ್ಗರ್ ಅನ್ನು ವಸಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುವುದಾಗಿ ವೃತ್ತ ನಿರೀಕ್ಷಕ ಯೋಗೇಶ್ ಮಾಹಿತಿ ನೀಡಿದ್ದಾರೆ.
ಇದೇ ರೀತಿಯ ದಾಳಿಯು ಮುಂದುವರೆಯಲಿದ್ದು, ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ತಹಸಿಲ್ದಾರ್ ರೂಪಾ ತಿಳಿಸಿದ್ದಾರೆ.

ವೃತ್ತ ನಿರೀಕ್ಷಕ ಯೋಗೇಶ್, ಗ್ರಾಮಾಂತರ ಠಾಣೆ ಪಿಎಸ್‌ಐ ಗಿರೀಶ್, ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರೆ ಇಲಾಖೆ ಅಧಿಕಾರಿಗಳು ಕ್ರಷರ್‌ಗಳ ಮೇಲೆ ದಾಳಿ ನಡೆಸಿ, ಸ್ಛೋಟಕ ಹಾಗೂ ದಾಖಲೆ ಪರಿಶೀಲಿಸಿದರು.

Exit mobile version