ರಾಮಮಂದಿರ ನಿರ್ಮಾಣಕ್ಕೆ ಸಿದ್ದರಾಮಯ್ಯ ಸಹ ದೇಣಿಗೆ ಕೊಟ್ಟಿರುತ್ತಾರೆ; ಸಚಿವ ಎಸ್. ಟಿ. ಎಸ್

ಮೈಸೂರು, ಫೆ. 22: ರಾಮಮಂದಿರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ದೇಣಿಗೆ ಕೊಟ್ಟಿರುತ್ತಾರೆ. ಆದರೆ ಬಹಿರಂಗವಾಗಿ, ಸಾರ್ವಜನಿಕವಾಗಿ ಅವರು ಹೇಳಿಕೆ ನೀಡುತ್ತಿಲ್ಲ. ಸರ್ಕಾರ ಸುಗಮವಾಗಿ ಆಡಳಿತ ನಡೆಸುತ್ತಿರುವುದಕ್ಕೆ ಅವರಿಗೆ ಯಾವುದೇ ರೀತಿ ಮಾತನಾಡಲು ಆಗದ್ದರಿಂದ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ
ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ರಥಕ್ಕೆ ದೇವರನ್ನು ಕೂರಿಸುವ ಲಿಫ್ಟ್ ಅನ್ನು ರೈಲ್ವೆ ಇಲಾಖೆ ದೇವಸ್ಥಾನಕ್ಕೆ ಹಸ್ತಾಂತರಿಸುವ ಕಾರ್ಯಕ್ಕೆ ಚಾಲನೆ ನೀಡಿದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಸುಗಮವಾಗಿ, ದಕ್ಷವಾಗಿ ಹೋಗುತ್ತಿದೆ. ಮಾತನಾಡಲೂ ಏನೂ ಉಳಿದಿಲ್ಲವಾದ್ದರಿಂದ ಇಂತಹ ಹೇಳಿಕೆ ಕೊಡುತ್ತಿದ್ದಾರೆ. ಇವರು ಬಾಯಿ ಚಪಲಕ್ಕೆ ಲೆಕ್ಕ ಕೇಳುತ್ತಿದ್ದಾರೆ.

ಶ್ರೀರಾಮ ಮಂದಿರ ನಿರ್ಮಾಣಕ್ಕೆ ಯಾರೂ ಸಹ ಬಲವಂತವಾಗಿ ದೇಣಿಗೆ ಸಂಗ್ರಹಿಸುತ್ತಿಲ್ಲ. ಒಂದೇ ಒಂದು ಪೈಸೆ ಸಹ ರಾಮಮಂದಿರಕ್ಕೆ ಉಪಯೋಗವಾಗಲಿದೆ ಹಾಗೂ ಎಲ್ಲವಕ್ಕೂ ಲೆಕ್ಕವನ್ನು ಇಡಲಾಗಿದೆ. ದೇಣಿಗೆ ಸಂಗ್ರಹಿಸಿದ ಮನೆಯ ಸಂಖ್ಯೆ, ಸಹಿ ಪಡೆದು, ಪ್ಯಾನ್ ಸಂಖ್ಯೆ ನಮೂದಿಸಲಾಗುತ್ತಿದೆ. ಜೊತೆಗೆ ರಶೀದಿಯನ್ನು ಸಹ ಕೊಡಲಾಗುತ್ತಿದೆ. ಪಕ್ಷಾತೀತವಾಗಿ, ಜಾತ್ಯತೀತವಾಗಿ, ಧರ್ಮಾತೀತವಾಗಿ ದೇಣಿಗೆಯನ್ನು ಜನರು ಸ್ವಯಂಪ್ರೇರಿತರಾಗಿ ಕೊಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹೀಗಾಗಿಯೇ ವಿರೋಧ ಪಕ್ಷದವರು ಹೇಳಿದಂತೆ ಶ್ರೀರಾಮಮಂದಿರಕ್ಕೆ ನೀಡಿದ ದೇಣಿಗೆಯ ಹಣ ದುರುಪಯೋಗವಾಗಿಲ್ಲ. ಖಂಡಿತವಾಗಿಯೂ ದೇಣಿಗೆಯ ಲೆಕ್ಕ ಸಿಗಲಿದೆ ಎಂದರು.

Exit mobile version