ಕೋಮು ಧ್ರುವೀಕರಣ ರಾಜಕೀಯದಿಂದ ಬಿಜೆಪಿ ಗೆದ್ದಿದೆ : ಸಿದ್ದರಾಮಯ್ಯ!

congress

ಉತ್ತರಪ್ರದೇಶದಲ್ಲಿ(Uttarpradesh) ಅಭೂತಪೂರ್ವ ಗೆಲುವು ಸಾಧಿಸಲು ಬಿಜೆಪಿ(BJP) ನಡೆಸಿದ ಕೋಮು ಧ್ರುವೀಕರಣದ ತಂತ್ರಗಳೇ ಕಾರಣ. ಈ ಮೂಲಕ ಬಿಜೆಪಿ ದೇಶದಲ್ಲಿ ಸಾಮಾಜಿಕ ಸಾಮರಸ್ಯಕ್ಕೆ ಪೆಟ್ಟು ನೀಡಿದೆ. ಇದು ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿ ಎಂದು ಕರ್ನಾಟಕದ(Karnataka) ಮಾಜಿ ಸಿಎಂ(Former Chief Minister) ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಪಂಚರಾಜ್ಯಗಳ ಚುನಾವಣೆಯ ಫಲಿತಾಂಶವನ್ನು ವಿಶ್ಲೇಷಣೆ ಮಾಡುತ್ತಾ ಮಾತನಾಡಿದ ಅವರು, ಚುನಾವಣೆ ಎನ್ನುವುದು ಪ್ರಜಾಪ್ರಭುತ್ವದಲ್ಲಿ ಜನತೆಯ ಅಭಿಪ್ರಾಯವನ್ನು ತಿಳಿದುಕೊಳ್ಳಲು ಇರುವ ಒಂದು ಅವಕಾಶ. ಸದ್ಯ ಜನತೆಯ ಅಭಿಪ್ರಾಯ ಬಿಜೆಪಿಯ ಪರವಾಗಿದೆ.

ಹಾಗಾಗಿ ಚುನಾವಣೆಯಲ್ಲಿ ಗೆದ್ದ ಎಲ್ಲ ಅಭ್ಯರ್ಥಿಗಳನ್ನು ನಾನು ಅಭಿನಂದಿಸುತ್ತೇನೆ. ನಮ್ಮ ಪಕ್ಷ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರುವಲ್ಲಿ ವಿಫಲವಾಗಿದೆ. ಆ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಬಿಜೆಪಿ ವಿರುದ್ದದ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದಿದ್ದಾರೆ. ಇನ್ನು ಬಿಜೆಪಿಯೂ ಚುನಾವಣೆಯಲ್ಲಿ ಮತದಾರರನ್ನು ದಾರಿ ತಪ್ಪಿಸುತ್ತಿದೆ. ಕೋಮುವಾದವನ್ನು ಜನರ ಮನದಲ್ಲಿ ತುಂಬಿ ಮತ ಪಡೆಯುತ್ತಿದೆ. ಪ್ರಜಾಪ್ರಭುತ್ವದಲ್ಲಿ ಕೂಲಿ ಮಾಡಿದವರಿಗೆ ಮತ ಸಿಗಬೇಕು. ಆದರೆ ಬಿಜೆಪಿ ಏನನ್ನೂ ಮಾಡದೇ ಮತ ಪಡೆಯುತ್ತಿದೆ.

ಉತ್ತರಪ್ರದೇಶ ಇಡೀ ದೇಶದಲ್ಲಿಯೇ ಅತ್ಯಂತ ಹಿಂದುಳಿದ ರಾಜ್ಯ. ಆ ರಾಜ್ಯದಲ್ಲಿ ನಿರುದ್ಯೋಗ ಮತ್ತು ಬಡತನ ತಾಂಡವವಾಡುತ್ತಿದೆ. ಕರೊನಾ ವೇಳೆಯಲ್ಲಿ ಉತ್ತರಪ್ರದೇಶದಲ್ಲಿ ಸಾಮಾನ್ಯ ಜನರ ಹೆಣಗಳು ಗಂಗಾ ನದಿಯಲ್ಲಿ ತೇಲಿ ಹೋದವು. ಸರಿಯಾಗಿ ಆಹಾರವನ್ನು ಕೊಡುವುದರಲ್ಲಿ ಯೋಗಿ ಸರ್ಕಾರ ವಿಫಲವಾಗಿದ್ದನ್ನು ಇಡೀ ದೇಶವೇ ನೋಡಿದೆ. ಆದರು ಕೋಮು ಧ್ರುವೀಕರಣದಿಂದ ಬಿಜೆಪಿ ಚುನಾವಣೆಯಲ್ಲಿ ಮತ್ತೆ ವಿಜಯ ಸಾಧಿಸಿದೆ. ಇನ್ನು ಈ ಬಾರಿಯ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಬಹಿರಂಗವಾಗಿಯೇ “ಈ ಬಾರಿಯ ಚುನಾವಣೆಯ 80 ವರ್ಸಸ್ 20” ಎಂದಿದ್ದರು. ಆ ಮೂಲಕ ಹಿಂದೂ-ಮುಸ್ಲಿಂ ನಡುವೆ ದ್ವೇಷದ ಭಾವ ಭಿತ್ತಿದ್ದರು.

ಹೀಗೆ ಒಮ್ಮೆ ಜನರ ತಲೆಗೆ ಕೋಮುದ್ವೇಷದ ಬೀಜ ಭಿತ್ತಿದರೆ, ಹಸಿವು, ನಿರುದ್ಯೋಗ, ಅನಾರೋಗ್ಯ ಎಲ್ಲವೂ ಮರೆತು ಹೋಗುತ್ತದೆ. ಅಭಿವೃದ್ದಿ ಮಾಯವಾಗುತ್ತದೆ. ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಅತ್ಯಂತ ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದರು. ನಮ್ಮ ಸರ್ಕಾರ ಬಡವರಿಗೆ ಉಚಿತ ಅಕ್ಕಿ ನೀಡಿದಾಗ ವಿರೋಧಿಸಿದ ಬಿಜೆಪಿ ನಾಯಕರು, ಈಗ ಉತ್ತರಪ್ರದೇಶದಲ್ಲಿ ನೀಡುತ್ತಿರುವ ಇದೇ ಕಾರ್ಯಕ್ರಮವನ್ನು ಹಾಡಿಹೊಗಳುತ್ತಿದ್ದಾರೆ.

ನಮ್ಮ ಪಕ್ಷ ಸಂವಿಧಾನದ ಆಶಯಗಳನ್ನು ನಂಬಿರುವ ಪಕ್ಷ. ನಾವು ಸಂವಿಧಾನದ ಆಶಯಗಳಿಗೆ ಬದ್ದರಾಗಿ ಕೆಲಸ ಮಾಡುತ್ತೇವೆ. ಈ ಸಿದ್ದಾಂತದ ಆಧಾರದ ಮೇಲೆ ನಮ್ಮ ಪಕ್ಷವನ್ನು ಮತ್ತೇ ಗಟ್ಟಿಗೊಳಿಸುತ್ತೇವೆ. ನಾವು ಎಂದಿಗೂ ನಮ್ಮ ಜಾತ್ಯಾತೀತ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Exit mobile version