ಸ್ವಾಮೀಜಿಗಳು ತಲೆ ಮೇಲೆ ಸೆರಗು ಹಾಕಲ್ವಾ? ಹಿಜಾಬ್‍ಗೂ ಅವಕಾಶ ಕೊಡಿ : ಸಿದ್ದರಾಮಯ್ಯ!

siddaramaiah

ಮಠಾಧೀಶರು ತಲೆಯ ಮೇಲೆ ಕಾವಿ ಸೆರಗು ಹಾಕುವುದಿಲ್ವಾ? ಕ್ರಿಶ್ಚಿಯನ್ ಸಮುದಾಯದಲ್ಲೂ ತಲೆಯ ಮೇಲೆ ಸೆರಗು ಹಾಕಲ್ವಾ? ಅದೇ ರೀತಿ ಹಿಜಾಬ್‍ಗೂ ಅವಕಾಶ ನೀಡಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇನ್ನು ರಾಜ್ಯದಲ್ಲಿ ನಡೆಯುತ್ತಿರುವ ಈ ಹಿಜಾಬ್ ಸಂಘರ್ಷ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಹಿಜಾಬ್ ವಿವಾದ ‘ಧರ್ಮವ್ಯಾಪಾರ’ಕ್ಕೂ ಕಾರಣವಾಗಿತ್ತು, ಇದೀಗ ಮಠಾಧೀಶರ ಕಾವಿ ಸೆರಗಿಗೂ ಹಿಜಾಬ್ ಬಿಸಿ ತಟ್ಟಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಆಡಿದ ಮಾತು ಇದೀಗ ವಿವಾದಕ್ಕೆ ಕಾರಣವಾಗಿದೆ. ಮಠಾಧೀಶರು ಹಾಕುವ ಕಾವಿ ಸೆರಗು ಮತ್ತು ಹಿಜಾಬ್ ಒಂದೇ ಎಂಬಂತೆ ಮಾತನಾಡಿದ ಸಿದ್ದರಾಮಯ್ಯನವರ ನಿಲುವನ್ನು ಅನೇಕ ಮಠಾಧೀಶರು ಖಂಡಿಸಿದ್ದಾರೆ. ಸಿದ್ದರಾಮಯ್ಯ ಆಡಿದ ಮಾತು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ಮಠಾಧೀಶರು ಕಾವಿ ಸೆರಗು ಹಾಕಿಕೊಂಡು ಕಾಲೇಜಿಗೆ ಹೋಗುತ್ತಾರಾ ಮಿ. ಸಿದ್ದರಾಮಯ್ಯನವರೇ?’ ಎಂದು ಸುದೀಪ್ ಎಂಬುವವರು ಪ್ರಶ್ನೆ ಮಾಡಿದ್ದರೆ, ‘ರಾಜ್ಯದ ಮಾಜಿ ಮುಖ್ಯಮಂತ್ರಿಗಳಾಗಿದ್ದ ತಮಗೆ ಮಠಕ್ಕೂ ಶಾಲೆಗೂ ಇರುವ ಸಾಮಾನ್ಯ ವ್ಯತ್ಯಾಸ ತಿಳಿದಿಲ್ಲವಲ್ಲ…’ ಎಂದು ವಿರೇಶ್ ಹೇಳಿದ್ದಾರೆ.

ಇನ್ನು ‘ ಮಠಗಳು ಧಾರ್ಮಿಕ ಸಂಕೇತ, ಶಾಲೆ ಸಮಾನತೆಯ ಸಂಕೇತ’ ಎಂಬುದನ್ನು ಸಿದ್ದರಾಮಯ್ಯನವರಿಗೆ ಅರ್ಥ ಮಾಡಿಸಬೇಕಿದೆ’ ಎಂದು ಸಾಗರ್ ಎಂಬುವವರು ವ್ಯಂಗ್ಯವಾಡಿದ್ದಾರೆ. ಇನ್ನು ಸೋಮವಾರದಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ನಡೆಯಲಿದ್ದು, ಹೀಗಾಗಿ ಕೆಲ ಮುಸ್ಲಿಂ ಮುಖಂಡರು ಸಿದ್ದರಾಮಯ್ಯನವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಪರಿಸ್ಥಿತಿ ಹೀಗೆ ಮುಂದುವರೆದರೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯಲು ಸಾಧ್ಯವಾಗುವುದಿಲ್ಲ.

ಹೀಗಾಗಿ ಸರ್ಕಾರದ ಮೇಲೆ ತಾವು ಒತ್ತಡ ಹಾಕಬೇಕು. ಹಿಜಾಬ್ ಅಲ್ಲದಿದ್ದರು, ಹಿಜಾಬ್ ರೀತಿಯಲ್ಲಿಯೇ ದುಪ್ಪಟ್ಟಾವನ್ನಾದರೂ ಧರಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದರು. ಇದೇ ವಿಷಯವನ್ನು ಸಿದ್ದರಾಮಯ್ಯ ನಿನ್ನೆ ವಿಧಾನಸಭೆಯಲ್ಲಿಯೂ ಪ್ರಸ್ತಾಪಿಸಿದ್ದರು. ಆದರೆ, ರಾಜ್ಯ ಸರ್ಕಾರ ಹೈಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡುವುದಿಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

Exit mobile version