GST ಹೆಚ್ಚಳ ; ಈ ಅನ್ಯಾಯದ ವಿರುದ್ಧ ಜನಸಾಮಾನ್ಯರು ಬೀದಿಗಿಳಿಯಬೇಕು : ಸಿದ್ದರಾಮಯ್ಯ

GST

ಕೊರೊನಾ(Covid) ಕಾಲದಲ್ಲಿ ಕೂಡ ಕಾರ್ಪೋರೇಟ್ ಸಂಸ್ಥೆಗಳ(Corporate Office) ಆದಾಯ 33 ಲಕ್ಷ ಕೋಟಿ ಹೆಚ್ಚಾಗಿದೆ.

ಲಾಭದಲ್ಲಿರುವ ಕಾರ್ಪೋರೇಟ್ ಸಂಸ್ಥೆಗಳ ಮೇಲಿನ ತೆರಿಗೆಯನ್ನು(Tax) 30% ಇಂದ 22% ಗೆ ಇಳಿಕೆ ಮಾಡಿ, ಬದುಕು ಸಾಗಿಸಲು ಹೆಣಗಾಡುತ್ತಿರುವ ಜನಸಾಮಾನ್ಯರ ಮೇಲೆ ಹೆಚ್ಚು ತೆರಿಗೆ ವಿಧಿಸುವುದು ಯಾವ ನ್ಯಾಯ ಪ್ರಧಾನಿ ಅವರೇ.

ಜಿಎಸ್ಟಿ(GST) ಕೌನ್ಸಿಲ್ ನಲ್ಲಿ ನಿರ್ಣಯಗಳು ಬಹುಮತದ ಮೇಲೆ ತೀರ್ಮಾನವಾಗುತ್ತದೆ, ದೇಶದ ಹೆಚ್ಚಿನ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳೇ ಇವೆ.

ಜಿಎಸ್ಟಿ ಕಮಿಟಿ ಅಧ್ಯಕ್ಷರು ಕೇಂದ್ರದ ಹಣಕಾಸು ಸಚಿವರೇ ಆಗಿರುವುದರಿಂದ ತಮಗೆ ಬೇಕಾದಂತೆ ನಿರ್ಣಯ ಮಾಡುತ್ತಿದ್ದಾರೆ. ಈ ಅನ್ಯಾಯದ ವಿರುದ್ಧ ಜನಸಾಮಾನ್ಯರು ಬೀದಿಗಿಳಿಯಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಕರೆ ನೀಡಿದ್ದಾರೆ.


ಜಿಎಸ್ಟಿ ಹೆಚ್ಚಳವನ್ನು ಖಂಡಿಸಿ ಸರಣಿ ಟ್ವೀಟ್ ಮಾಡಿರುವ ಅವರು, ಬ್ಯಾಂಕುಗಳ ಚೆಕ್ ಬುಕ್ ಮೇಲಿದ್ದ ತೆರಿಗೆ ವಿನಾಯಿತಿಯನ್ನು ತೆಗೆದು ಈಗ 18% ತೆರಿಗೆ ವಿಧಿಸುವ ಮೂಲಕ ಬಡ ಜನರನ್ನು ಬ್ಯಾಂಕುಗಳಿಂದ ದೂರ ತಳ್ಳುವ ಕೆಲಸ ಮಾಡಲಾಗಿದೆ. ಸಾಮಾನ್ಯ ಜನರ ಮೇಲೆ ನರೇಂದ್ರ ಮೋದಿ(Narendra Modi) ಸರ್ಕಾರಕ್ಕೆ ಯಾಕಿಷ್ಟು ದ್ವೇಷ, ಅಸಹನೆ?

ಬರಹ ಮತ್ತು ಮುದ್ರಣದ ಇಂಕ್ ಮೇಲಿನ ತೆರಿಗೆಯನ್ನು 12% ಇಂದ 18% ಗೆ ಹೆಚ್ಚಿಸಲಾಗಿದೆ. ಶೈಕ್ಷಣಿಕ ಮ್ಯಾಪ್, ಚಾರ್ಟ್ ಗಳಿಗೆ ತೆರಿಗೆ ವಿನಾಯಿತಿ ಇತ್ತು, ಈಗ 12% ತೆರಿಗೆ ಹೇರಿ ನರೇಂದ್ರ ಮೋದಿ ಅವರು ಬಡ ವಿದ್ಯಾರ್ಥಿಗಳನ್ನು ಶಿಕ್ಷಣ ವಂಚಿತರಾಗಲಿಸಲು ಹೊರಟಿದ್ದಾರೆ.

ಧಾನ್ಯಗಳನ್ನು ಸ್ವಚ್ಚ ಮಾಡುವ, ಹಿಟ್ಟು ಮಾಡುವ ಯಂತ್ರಗಳ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರದವರು 12% ಇಂದ 18% ಗೆ ಹೆಚ್ಚಿಸಿದ್ದಾರೆ. ಎಲ್ಇಡಿ ಬಲ್ಬ್ ಮತ್ತು ಸಂಬಂಧಿತ ವಸ್ತುಗಳ ಮೇಲಿನ ತೆರಿಗೆ 12% ಇಂದ 18% ಗೆ ಏರಿಸಲಾಗಿದೆ. ಈ ತೆರಿಗೆ ಏರಿಕೆ ಬಡವರ ಬದುಕು ಕಸಿಯಲಿದೆ.

ಹಣ್ಣು, ತರಕಾರಿ ಮತ್ತು ಮೊಟ್ಟೆಗಳನ್ನು ಪ್ರತ್ಯೇಕಗೊಳಿಸುವ, ಗ್ರೇಡಿಂಗ್ ಹಾಗೂ ಹಾಲು ಕರೆಯುವ ಯಂತ್ರಗಳ ಮೇಲಿನ ತೆರಿಗೆ 5% ಇಂದ 18% ಗೆ ಏರಿಸಿದ್ದಾರೆ. ಸೋಲಾರ್ ಸಿಸ್ಟಂ ಮತ್ತು ಸೋಲಾರ್ ವಾಟರ್ ಹೀಟರ್ ಗಳ ಮೇಲೆ 5% ಇಂದ 12% ಗೆ ತೆರಿಗೆ ಏರಿಕೆ ಮಾಡಿದ್ದಾರೆ.

ರೈತರು ಹಾಗೂ ಜನ ಸಾಮಾನ್ಯರು ಹೊಲ ಗದ್ದೆಗಳಲ್ಲಿ ಬಳಸುವ ಸಬ್ ಮೆರಿನ್ ಪಂಪ್ ಗಳ ಮೇಲೆ 12% ಇದ್ದ ತೆರಿಗೆಯನ್ನು 18% ಗೆ ಏರಿಸಿದ್ದಾರೆ. ಅಕಾಲಿಕ ಮಳೆ, ಪ್ರವಾಹ, ರಸಗೊಬ್ಬರ ಬೆಲೆಯೇರಿಕೆಯಿಂದ ಕಂಗಾಲಾಗಿದ್ದ ರೈತರಿಗೆ ಈ ತೆರಿಗೆ ಏರಿಕೆ ಬರಸಿಡಿಲಂತೆ ಬಡಿಯಲಿದೆ. ಜಿಎಸ್ಟಿ ಪರಿಹಾರ ನೀಡಲು ರಾಜ್ಯಗಳ ಮೂಲಕ ಸೆಸ್ ಸಂಗ್ರಹಿಸಲಾಗುತ್ತಿದೆ.

ಐಷರಾಮಿ ಮತ್ತು ಹಾನಿಕಾರಕ ವಸ್ತುಗಳ ಮೂಲಕ ಸಂಗ್ರಹಿಸಿದ ಸೆಸ್ ಹಣದಲ್ಲಿ ಪರಿಹಾರ ನೀಡುತ್ತಿದ್ದರು. 2026ರ ವರೆಗೆ ಈ ಸೆಸ್ ಸಂಗ್ರಹ ಮುಂದುವರೆದರೂ ಕಷ್ಟದಲ್ಲಿರುವ ರಾಜ್ಯಗಳಿಗೆ ಇದರಲ್ಲಿ ಪರಿಹಾರದ ಹಣ ಸಿಗುವುದಿಲ್ಲ.

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಣಕಾಸು ಸಚಿವರು ಅಸಹಾಯಕರಂತೆ ಕೇಂದ್ರ ಸರ್ಕಾರದ ತೀರ್ಮಾನಕ್ಕೆ ತಲೆಬಾಗಿ ಒಪ್ಪಿಕೊಳ್ತಾರೆ. ರಾಜ್ಯಗಳಿಗೆ ಅನ್ಯಾಯವಾದರೂ ಕೇಂದ್ರದ ಮುಂದೆ ಹೇಳುವ ಶಕ್ತಿ ಅವರಿಗೆ ಇಲ್ಲ. ರಾಜ್ಯ ಬಿಜೆಪಿ ನಾಯಕರ ಹೇಡಿತನಕ್ಕೆ ರಾಜ್ಯದ ಹಿತಾಸಕ್ತಿ ಬಲಿಯಾಗುತ್ತಿದೆ.


ಕೇಂದ್ರ ಸರ್ಕಾರ ಜಿಎಸ್ಟಿ ಪರಿಹಾರ ಕೊಡುವುದನ್ನು ನಿಲ್ಲಿಸಿದರೆ ನಮ್ಮ ರಾಜ್ಯವೊಂದಕ್ಕೆ ವರ್ಷಕ್ಕೆ ಕನಿಷ್ಠ 20,000 ಕೋಟಿ ರೂಪಾಯಿ ನಷ್ಟವಾಗುತ್ತದೆ. ಹಾಗಾಗಿ ನಾನು ಅನೇಕ ಬಾರಿ ಸದನದ ಒಳಗೆ ಮತ್ತು ಹೊರಗೆ ಜಿಎಸ್ಟಿ ಪರಿಹಾರ ಮುಂದುವರೆಸುವಂತೆ ಒತ್ತಾಯ ಮಾಡಿದ್ದೇನೆ. ಜಿಎಸ್ಟಿ ಜಾರಿಗೆ ಮೊದಲು ರಾಜ್ಯದ ತೆರಿಗೆ ಬೆಳವಣಿಗೆ ದರ 14% ಇತ್ತು, ಈ ನಷ್ಟ ಭರಿಸಲು ಕೇಂದ್ರ ಸರ್ಕಾರ 14% ಜಿಎಸ್ಟಿ ಪರಿಹಾರ ನೀಡಬೇಕು ಎಂದು ಹಿಂದೆ ಜಿಎಸ್ಟಿ ಕೌನ್ಸಿಲ್ ನಲ್ಲಿ ತೀರ್ಮಾನವಾಗಿತ್ತು. ಈ ಅವಧಿ ಇಂದಿಗೆ ಕೊನೆಯಾಗಲಿದೆ.

ಮುಂದೇನು? ಮೊನ್ನೆ ಚಂಡೀಘಡದಲ್ಲಿ ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಭಾಗವಹಿಸಿದ್ದ ರಾಜ್ಯ ಸರ್ಕಾರದ ಪ್ರತಿನಿಧಿಗಳು ಜಿಎಸ್ಟಿ ಪರಿಹಾರ ಮುಂದುವರೆಸುವಂತೆ ಒಕ್ಕೊರಲಿನಿಂದ ಕೇಂದ್ರ ಸರ್ಕಾರವನ್ನು ಒತ್ತಾಯಿಸದೆ ರಾಜ್ಯದ ಜನರಿಗೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
Exit mobile version