ಒಬ್ಬ ಮೌಲ್ವಿ ತಪ್ಪು ಮಾಡಿದ್ರೆ, ಎಲ್ಲರೂ ತಪ್ಪು ಮಾಡಿದ್ದಾರೆ ಎಂದರ್ಥವಲ್ಲ : ಸಿದ್ದರಾಮಯ್ಯ!

political

ಯಾರೋ ಒಬ್ಬ ಮೌಲ್ವಿ ತಪ್ಪು ಮಾಡಿದ್ರೆ, ಎಲ್ಲರೂ ತಪ್ಪು ಮಾಡಿದ್ದಾರೆ ಎಂದರ್ಥವಲ್ಲ. ಅಷ್ಟಕ್ಕೂ ಆತ ಮೌಲ್ವಿಯೋ..ಅಲ್ಲವೋ ಎಂಬುದು ನನಗೂ ಸರಿಯಾಗಿ ಗೊತ್ತಿಲ್ಲಾ ಎಂದು ವಿಪಕ್ಷ ನಾಯಕ(Opposition Leader) ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ.


ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹುಬ್ಬಳ್ಳಿ ಗಲಭೆಯನ್ನು ನಾನು ಈಗಾಗಲೇ ಖಂಡಿಸಿದ್ದೇನೆ. ಶಾಂತಿ ಕದಡುವ ಪ್ರಯತ್ನವನ್ನು ಯಾರೂ ಮಾಡಬಾರದು ಎಂದು ಮನವಿ ಮಾಡಿದ್ದೇನೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ. ಇನ್ನು ಹುಬ್ಬಳ್ಳಿ ಗಲಭೆಯಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯಾಗಲಿ. ಎಲ್ಲ ತಪ್ಪಿತಸ್ಥರಿಗೂ ಶಿಕ್ಷೆಯಾಗಲಿ. ಆದರೆ ನಿರಪರಾಧಿಗಳ ಮೇಲೆ ಕ್ರಮ ಬೇಡ ಎಂದು ಹೇಳಿದ್ದಾರೆ.

ಇನ್ನು ಪಿಎಸ್‍ಐ ನೇಮಕಾತಿಯಲ್ಲಿ ನಡೆದಿರುವ ಹಗರಣದ ಬಗ್ಗೆ ಸರ್ಕಾರ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ನೇಮಕಾತಿಯಲ್ಲಿ ಅಕ್ರಮ ಎಸಗಿರುವುದು ಜಾಮೀನು ರಹಿತ ಅಪರಾಧ ಹೀಗಾಗಿ ಅಪರಾಧಿಗಳ ಮೇಲೆ ಕಾನೂನು ಕ್ರಮ ಜರುಗಿಸಲಿ ಎಂದು ಒತ್ತಾಯಿಸಿದ್ದಾರೆ. ಇನ್ನು ಇತ್ತೀಚೆಗೆ ರಾಜ್ಯಕ್ಕೆ ಆಗಮಿಸಿದ್ದ ಕೇಜ್ರಿವಾಲ್ ರಾಜ್ಯ ಸರ್ಕಾರವನ್ನು 40% ಸರ್ಕಾರ ಎಂದು ಟೀಕಿಸಿದ್ದರ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ಕೂಡಾ ಅದನ್ನೇ ಹೇಳುತ್ತಿದ್ದೇವೆ.

40% ಕಮಿಷನ್ ಕುರಿತು ಜನರೇ ತೀರ್ಮಾನ ಮಾಡಲಿ. ಇನ್ನು ಆಮ್ ಆದ್ಮಿ ಪಕ್ಷ ಕೂಡಾ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿ ಎಲ್ಲವನ್ನೂ ಜನರು ತೀರ್ಮಾನ ಮಾಡುತ್ತಾರೆ. ಆಮ್ ಆದ್ಮಿ ಪಕ್ಷ ಅನೇಕ ವರ್ಷಗಳಿಂದ ರಾಜಕೀಯದಲ್ಲಿದೆ. ಅದು ಕೂಡಾ ದೊಡ್ಡ ಪಕ್ಷವಾಗಿ ಗುರುತಿಸಿಕೊಂಡಿದೆ. ವಿಧಾನಸಭಾ ಚುನಾವಣೆಯಲ್ಲಿ ಅವರು ಅಭ್ಯರ್ಥಿಗಳನ್ನು ಹಾಕಿದರೆ ಜನರು ತೀರ್ಮಾನ ಮಾಡುತ್ತಾರೆ.

ಇನ್ನು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆ ಕುರಿತು ಮಾತನಾಡಿದ ಅವರು, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಇದು ನಮ್ಮ ರಾಷ್ಟ್ರಮಟ್ಟದ ನಾಯಕರು ನಿರ್ಧರಿಸುತ್ತಾರೆ. ಹೀಗಾಗಿ ಈ ಕುರಿತು ನಾನು ಮಾತನಾಡುವುದು ಸರಿಯಲ್ಲ ಎಂದರು.

Exit mobile version