ಸಿಲಿಕಾನ್‌ ಸಿಟಿಯಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಬೆಂಗಳೂರು, ಡಿ. 30: ರಾಜ್ಯದಲ್ಲಿರುವ ಕೊರೊನಾ ಆತಂಕ ಪರಿಸ್ಥಿತಿ ಜತೆಗೆ ರೂಪಾಂತರಗೊಂಡಿರುವ ಹೊಸ ವೈರಸ್ ವ್ಯಾಪಕವಾಗಿ ಹರಡುತ್ತಿರುವುದನ್ನು ಗಮನಿಸಿ, ಮುಂಬರುವ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ತಿಳಿಸಿದ್ದಾರೆ.

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಡಿಸೆಂಬರ್ 31 ಸಂಜೆ 6 ರಿಂದ ಜನವರಿ 1 ಬೆಳಿಗ್ಗೆ 6 ರವರೆಗೆ ಸೆಕ್ಷನ್ 144 ಜಾರಿಯಲ್ಲಿರುತ್ತದೆ.
ಮುಖ್ಯರಸ್ತೆ, ಪಾರ್ಕ್, ಪ್ಲೇ ಗ್ರೌಂಡ್ ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ಯಾವುದೇ ರೀತಿಯ ಗುಂಪು ಗೂಡುವಿಕೆಯನ್ನು ನಿಷೇಧಿಸಲಾಗಿದೆ.

ಮನೆಗಳಲ್ಲಿ, ಪ್ರೈವೇಟ್ ಕ್ಲಬ್, ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್ ಗಳಲ್ಲಿ ಸದಸ್ಯರು ಮಾತ್ರ ಆಚರಿಸಿಕೊಳ್ಳಬಹುದು. ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾ ನಗರದಲ್ಲಿ ‘ಸಂಚಾರ ನಿಷೇಧ’ ವಲಯಗಳನ್ನು ಮಾಡಲಾಗುತ್ತದೆ.

ಮುಂಚಿತವಾಗಿ ಬುಕ್ ಮಾಡಿರುವ ಸದಸ್ಯರಿಗೆ ಮಾತ್ರ ಕ್ಲಬ್, ರೆಸ್ಟೋರೆಂಟ್ ಗಳಿಗೆ ಪ್ರವೇಶವಿರುತ್ತದೆ. ಅನವಶ್ಯಕ ಸಂಚಾರ, ಬೈಕ್ ಸುತ್ತಾಟ, ವ್ಹಿಲಿಂಗ್, ನಿಷೇಧಿಸಲಾಗಿದೆ.
ನಗರದ ಎಲ್ಲಾ ಫ್ಲೈ ಓವರ್ ಗಳನ್ನು ಮುಚ್ಚಲಾಗಿರುತ್ತದೆ. ಹಾಗೂ ಕೆಲವೆಡೆ ಸಂಚಾರ ನಿಯಂತ್ರಣ ಜಾರಿಯಲ್ಲಿರುತ್ತದೆ.

ಈ ಆದೇಶವನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸುವುದಲ್ಲದೆ, IPC ಸೆಕ್ಷನ್ 188, ಹಾಗೂ NDMA ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಲ್ಲಾ ಮಾರ್ಗಸೂಚಿಯನ್ನು ಪಾಲಿಸಬೇಕಾಗಿ ವಿನಂತಿಸಿದ್ದಾರೆ.

Exit mobile version