ಕರ್ನಾಟಕದ ಅತೀ ದೊಡ್ಡ `ಜಾತ್ರೆ’ ನಡೆಯೋದು ಈ ಜಿಲ್ಲೆಯಲ್ಲೇ!

sirasi fest

ಜಾತ್ರೆಗಳು(Village Festival) ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಹಿಂದಿನ ಕಾಲದಲ್ಲಿ ಒಂದು ಊರಿನಲ್ಲಿ ಜಾತ್ರೆ ಇದೇ ಎಂದರೆ, ತಿಂಗಳಿನಿಂದಲೇ ಊರಿನ ಪ್ರತಿ ಮನೆಯಲ್ಲೂ ಸಡಗರ ಸಂಭ್ರಮ ಶುರುವಾಗುತ್ತಿತ್ತು.

ಆದ್ರೆ ಈಗ ಟಿವಿ ಮೊಬೈಲ್ ಗಳ ಹಾವಳಿಯಿಂದ ಇಂತಹ ಸಡಗರಗಳು ಕಡಿಮೆಯಾಗಿವೆ. ಆದ್ರೆ ಇನ್ನೂ ಕೆಲವು ಕಡೆಗಳಲ್ಲಿ ಜಾತ್ರೆಗಳನ್ನು ಆದ್ದೂರಿಯಾಗಿ ಆಚರಿಸುತ್ತಾರೆ. ಈ ಜಾತ್ರೆ ಅನ್ನುವ ಆಚರಣೆಗಳು ಜಾತಿ, ಬೇಧ-ಬಾವ ಮರೆತು ಎಲ್ಲರನ್ನೂ ಒಗ್ಗೂಡಿಸುತ್ತವೆ. ನಮ್ಮ ದೇಶವಂತೂ ಸಂಪ್ರದಾಯ ಆಚರಣೆಗಳಲ್ಲಿ ಮುಂಚೂಣಿಯಲ್ಲಿದೆ. ಹಾಗೆಯೇ ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ ಹಲವಾರು ಜಾತ್ರೆಗಳು ನಡೆಯುತ್ತವೆ. ಕೆಲವು ಜಾತ್ರೆಗಳು ಎರಡು ವರ್ಷಕ್ಕೊಮ್ಮೆ ನಡೆದರೆ, ಇನ್ನೂ ಕೆಲವು ಜಾತ್ರೆಗಳು 5 ವರ್ಷಕ್ಕೊಮ್ಮೆ,

10 ವರ್ಷಕ್ಕೊಮ್ಮೆ ನಡೆಯುವ ಅಪರೂಪದ ಜಾತ್ರೆಗಳೂ ಇವೆ. ಶಿರಸಿಯ ಮಾರಿಕಾಂಬ ದೇವಾಲಯ ಉಳಿದೆಲ್ಲಾ ದೇವಾಲಯಗಳಿಗಿಂತಲೂ ವಿಭಿನ್ನವಾಗಿದ್ದು ಬಾಹ್ಯ ನೋಟಕ್ಕೆ ಅದೊಂದು ಸುಂದರವಾದ ಅರಮನೆಯಂತೆಯೇ ಭಾಸವಾಗುತ್ತದೆ. ಈ ಪವಿತ್ರ ದೇವಾಲಯವನ್ನು ಪ್ರವೇಶಿಸುತ್ತಿದ್ದಂತೆ ದೇವಾಲಯದ ಇಕ್ಕೆಲಗಳಲ್ಲಿರುವ ಆನೆಗಳ ಮೂರ್ತಿಯು ನಮ್ಮನ್ನು ದೇವಾಲಯದ ಒಳಗೆ ಆಹ್ವಾನಿದರೆ, ಈ ದೇವಾಲಯದ ಪ್ರವೇಶ ದ್ವಾರದಿಂದ ಹಿಡಿದು ಕೊನೆಯವರೆಗೂ ಗೋಡೆಗಳ ಮೇಲೆ ಕೆಂಪು ಬಣ್ಣದಿಂದ ಪುರಾತನ ಕಥೆಗಳನ್ನು ಬರೆಯಲಾಗಿದೆ.


ಶಿರಸಿಯಲ್ಲಿ 2 ವರ್ಷಗಳಿಗೊಮ್ಮೆ ಮಾರ್ಚ್ ತಿಂಗಳಿನಲ್ಲಿ ಬಹಳ ಅದ್ದೂರಿಯಿಂದ ೯ ದಿನಗಳ ಕಾಲ ಜಾತ್ರೆಯನ್ನು ಆಚರಿಸಲಾಗುತ್ತದೆ. ಜಾತ್ರೆ ನಡೆಯುವ ಸಂದರ್ಭದಲ್ಲಿಯೇ ಹೋಳಿಹಬ್ಬ ಬರುವ ಕಾರಣ ಜಾತ್ರೆ ಇದ್ದ ವರ್ಷ ಕಾಮನ ಹುಣ್ಣಿಯೆನ್ನು ಇಲ್ಲಿ ಆಚರಿಸುವುದಿಲ್ಲ. ಈ ಶಿರಸಿ ಜಾತ್ರೆಯನ್ನು ಸ್ಥಳೀಯರು ಮಾರಿ ಜಾತ್ರೆ ಎಂದೇ ಕರೆಯುತ್ತಾರೆ. ಸಾಮಾನ್ಯವಾಗಿ ಉಳಿದೆಲ್ಲಾ ಜಾತ್ರೆಗಳಲ್ಲಿ ಮೂಲ ವಿಗ್ರಹಗಳು ದೇವಾಲಯದಲ್ಲಿಯೇ ಇದ್ದು ಅದರ ಉತ್ಸವ ಮೂರ್ತಿಯನ್ನು ರಥ ಅಥವಾ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಿದರೆ,

ಇಲ್ಲಿ ಮಾತ್ರಾ, 7 ಅಡಿ ಎತ್ತರದ ವಿಗ್ರಹವನ್ನೇ ಅಲಂಕಾರ ಸಮೇತ ಮದುವೆ ಮಾಡಿ ಮೆರವಣಿಗೆಯಲ್ಲಿ ಬಿಡಕಿ ಬೈಲಿಗೆ ತಂದು ಭಕ್ತರಿಗೆ ದೇವಿಯ ನಿಕಟ ದರ್ಶನ ನೀಡುವ ಸಂಪ್ರದಾಯ ಇಲ್ಲಿ ರೂಢಿಯಲಿದೆ. ವಜ್ರ, ನವರತ್ನ ಖಚಿತ ಸ್ವರ್ಣರತ್ನ, ಹಾರ, ನೂಪುರ, ಬೆಳ್ಳಿ, ಕಡಗಗಳು, 8 ಕೈಗಳು. ಒಂದೊಂದು ಕೈಗಳಲ್ಲೂ ಒಂದೊಂದು ವಿಶಿಷ್ಟ ಆಭರಣ ಹಿಡುದು ಗದ್ದುಗೆಯಲ್ಲಿ ವಿರಾಜಮಾನಳಾದ ಕೆಂಪು ಮುಖದ ಅರಳಿದ ಕಂಗಳ ಮಹಿಷ ಮರ್ಧಿನಿ ಭಕ್ತಾದಿಗಳ ಹೃನ್ಮನಗಳನ್ನು ಸೆಳೆಯುತ್ತಾಳೆ,

9 ದಿನಗಳ ಅದ್ದೂರಿಯ ಆಚರಣೆ, ಧಾರ್ಮಿಕ ವಿಧಿವಿಧಾನಗಳ ಬಳಿಕ ದೇವಿಯನ್ನು ಪುನಃ ಗುಡಿದುಂಬಿಸಿ ಅಲ್ಲಿನ ಚಪ್ಪರಕ್ಕೆ ಬೆಂಕಿ ಹಚ್ಚಲಾಗುತ್ತದೆ. ಪ್ರತಿ ವರ್ಷವೂ ಈ ದೇವಾಲಯದ ವತಿಯಿಂದಲೇ ಬಲಿಷ್ಠ ಕೊಣವೊಂದನ್ನು ಸಾಕಿ ಜಾತ್ರೆಯ ಸಮಯದಲ್ಲಿ ಕಡಿದು ದೇವಿಗೆ ಅರ್ಪಿಸುವ ಸಂಪ್ರದಾಯ ನೂರಾರು ವರ್ಷಗಳ ಕಾಲ ರೂಢಿಯಲ್ಲಿತ್ತು.

1963ರಲ್ಲಿ ಸಾಗರದ ಶ್ರೀ ಶ್ರೀಧರ ಸ್ವಾಮಿಗಳು ದೇವಿಯ ಉಗ್ರತೆಯನ್ನು ಕಡಿಮೆ ಮಾಡಿ ಪ್ರಾಣಿ ಬಲಿ ನಿಲ್ಲಿಸಿದ್ದಲ್ಲದೇ, ಮಾರಿಗೆ ಬಿಟ್ಟ ಕೋಣನನ್ನು ಜಾತ್ರೆಗೆ ಮೊದಲು ಊರಿನ ತುಂಬಾ ಸುತ್ತಿಸಿ ಜಾತ್ರೆಯ ಸಮಯಯಲ್ಲಿ ಕೋಣನ ಬಲಿಯ ಬದಲಾಗಿ ಸಾಂಕೇತಿಕವಾಗಿ ಸಾತ್ವಿಕ ಬಲಿರೂಪದಲ್ಲಿ ಬೂದಕುಂಬಳಕಾಯಿಯನ್ನು ನೀಡುವ ಸಂಪ್ರದಾಯವನ್ನು ಜಾರಿಗೆ ತಂದರು ಎಂದು ಸ್ಥಳೀಯರು ಹೇಳಿದರೆ, ಇನ್ನೂ ಕೆಲವರು ಚುಚ್ಚು ಮದ್ದಿನ ಸೂಜಿಯಿಂದ ಮರಿಗೆ ಬಿಟ್ಟ ಕೋಣದ ರಕ್ತವನ್ನು ಹೀರಿ ದೇವಿಗೆ ಅರ್ಪಿಸಲಾಗುತ್ತದೆ ಎಂದೂ ಹೇಳುತ್ತಾರೆ. ಅಂದಿನಿಂದ ಉಳಿದ ದೇವಿಯ ಜಾತ್ರೆಗಳಂತೆಯೇ ಇಲ್ಲಿ ಪ್ರಾಣಿ ಬಲಿ ಸಂಪೂರ್ಣವಾಗಿ ನಿಷೇಧವಾಗಿದೆ.

Exit mobile version