ನಾನು ಕಾನ್ವೆಂಟ್ ದಲಿತನಲ್ಲ, ಪ್ರಜ್ಞಾವಂತ ದಲಿತ : ಪ್ರಿಯಾಂಕ್ ಖರ್ಗೆ!

Sunil kumar

ಕಾಂಗ್ರೆಸ್(Congress) ನಾಯಕ ಪ್ರಿಯಾಂಕ್ ಖರ್ಗೆ(Priyank Kharghe) ‘ಕಾನ್ವೆಂಟ್ ದಲಿತ’ ಎಂದು ವ್ಯಂಗ್ಯವಾಡಿದ್ದ ಇಂಧನ ಸಚಿವ(Oil Minister) ಸುನೀಲ್‍ಕುಮಾರ್(Sunil Kumar) ಹೇಳಿಕೆಗೆ ಇದೀಗ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಸಚಿವ ಸುನೀಲ್‍ಕುಮಾರ್ ಹೇಳಿಕೆ ಕುರಿತು ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಸುನೀಲ್ ಕುಮಾರ್ ಅವರು ನನ್ನ ವೈಯಕ್ತಿಕ ವಿಷಯಗಳ ಕುರಿತು ಮಾತನಾಡಿದ್ದಾರೆ. ಇಂತ ಹೇಳಿಕೆಗಳನ್ನು ಸಚಿವರಿಗೆ ಬಿಜೆಪಿ ಐಟಿಸೆಲ್ ಹೇಳಿಕೊಡುತ್ತಾ..? ಅವರ ಪ್ರಕಾರ ಬೆಂಗಳೂರು ದಲಿತರು ಬೇರೆ, ಮೈಸೂರು ದಲಿತರು ಬೇರೆಯೇ..? ಯಾಕೆ ದಲಿತರು ಬೆಂಗಳೂರಿನಲ್ಲಿ ಹುಟ್ಟಬಾರದಾ..? ಎಂದು ಪ್ರಶ್ನಿಸಿದರು.

ಉಡುಪಿಯ ಅದಮಾರು ಮಠದ ಶಾಲೆ ಬೆಂಗಳೂರಿನಲ್ಲಿದೆ. ಆ ಶಾಲೆಯಲ್ಲಿ ನಾನು ವಿದ್ಯಾಭ್ಯಾಸ ಮಾಡಿದ್ದೇನೆ. ನಾನು ಕಾನ್ವೆಂಟ್‍ನಲ್ಲಿ ಓದಿಲ್ಲ. ಅಮೇರಿಕಾದ ಷಿಕಾಗೋದಿಂದ ಹಿಡಿದು ಚಿತ್ತಾಪುರದವರೆಗೆ ಯಾವುದೇ ವಿಷಯದ ಕುರಿತು ಚರ್ಚೆಗೆ ನಾನು ಸಿದ್ದನಿದ್ದೇನೆ. ಯಾಕೆಂದರೆ ನಾನು ಪ್ರಜ್ಞಾವಂತ ದಲಿತ, ಕಾಸ್ಮೋಪಾಲಿಟನ್ ದಲಿತ ಎಂದರು. ನಾನು ಎರಡು ಬಾರಿ ಮಂತ್ರಿಯಾಗಿದ್ದೆ, ಸದ್ಯ ಕಾಂಗ್ರೆಸ್ ಪಕ್ಷದ ವಕ್ತಾರನಾಗಿದ್ದೇನೆ. ಸರ್ಕಾರವನ್ನು, ಮುಖ್ಯಮಂತ್ರಿಗಳನ್ನು ಪ್ರಶ್ನಿಸುವುದು ನನ್ನ ಹಕ್ಕು.

ನೀವು ನನ್ನ ಮೇಲೆ ವೈಯಕ್ತಿಕ ದಾಳಿ ಮಾಡುವುದು ನಿಮ್ಮ ಕಾರ್ಯತಂತ್ರದ ಭಾಗವಾಗಿದೆ. ಆದರೆ ಇದಕ್ಕೆಲ್ಲಾ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಪ್ರಶ್ನಿಸುವುದನ್ನು ನಿಲ್ಲಿಸುವುದಿಲ್ಲ. ನನ್ನ ಸರಳ ಪ್ರಶ್ನೆಗಳಿಗೆ ಉತ್ತರಿಸಲು ನಿಮ್ಮಿಂದಾಗುತ್ತಿಲ್ಲ. ಹೀಗಾಗಿ ನನ್ನ ಮೇಲೆ ವೈಯಕ್ತಿಕ ದಾಳಿ ಮಾಡುತ್ತಿದ್ದೀರಿ. ನನ್ನ ಪ್ರಶ್ನೆಗಳಿಗೆ ಉತ್ತರಿಸುವ ಯೋಗ್ಯತೆ ನಿಮಗಿಲ್ಲ ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು.

Exit mobile version