ಕಾಮನ್‍ವೆಲ್ತ್ ಗೇಮ್ಸ್ 2022 : ಹೊಸ ದಾಖಲೆ ಬರೆದ ತೇಜಸ್ವಿನ್ ಶಂಕರ್ ; ಪುರುಷರ ಹೈ ಜಂಪ್ ನಲ್ಲಿ ಭಾರತಕ್ಕೆ ಮೊದಲ ಪದಕ

Tejaswin Kumar

ಬರ್ಮಿಂಗ್ಹ್ಯಾಮ್‌ ನಲ್ಲಿ(Birmingham) ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ 2022 ರಲ್ಲಿ(CommonWealth Games 2022) ಭಾರತದ ಶಕ್ತಿ ಪ್ರದರ್ಶನ ಮುಂದುವರೆದಿದೆ. ಇದೀಗ ಪುರುಷರ ಹೈ ಜಂಪ್ನಲ್ಲಿ(High Jump) ಭಾರತದ ತೇಜಸ್ವಿನ್ ಶಂಕರ್(Tejaswin Shankar) ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ 2022ರ ಕ್ರೀಡಾಕೂಟದಲ್ಲಿ ಭಾರತದ ಯುವ ಹೈಜಂಪ್ ಪಟು ತೇಜಸ್ವಿನ್ ಶಂಕರ್, ಪದಕ ಗೆಲ್ಲುವ ಮೂಲಕ ಭಾರತದ ಅಥ್ಲೆಟಿಕ್ಸ್‌ನ ಟ್ರ್ಯಾಕ್ ಅಂಡ್ ಫೀಲ್ಡ್‌ ವಿಭಾಗದಲ್ಲಿ ಪದಕದ ಖಾತೆ ತೆರೆದಿದ್ದಾರೆ.

ಆಗಸ್ಟ್‌ 03ರ ತಡರಾತ್ರಿ ನಡೆದ ಹೈಜಂಪ್ ಫೈನಲ್ ಸ್ಪರ್ಧೆಯಲ್ಲಿ 23 ವರ್ಷದ ತೇಜಸ್ವಿನ್ ಶಂಕರ್ ಅತ್ಯದ್ಭುತ ಪ್ರದರ್ಶನ ತೋರುವ ಮೂಲಕ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತದ ರಾಷ್ಟ್ರೀಯ ದಾಖಲೆ ವೀರ ತೇಜಸ್ವಿನ್ ಶಂಕರ್, ಹೈಜಂಪ್ ಫೈನಲ್‌ನಲ್ಲಿ 2.22 ಮೀಟರ್ ಎತ್ತರ ಜಿಗಿಯುವ ಮೂಲಕ ಕಂಚಿನ ಪದಕ ಜಯಿಸಿದರೇ, 2.25 ಮೀಟರ್ ಎತ್ತರ ಜಿಗಿದ ನ್ಯೂಜಿಲೆಂಡ್‌ನ ಹಮಿಶ್ ಕೆರ್‌ ಚಿನ್ನ ಹಾಗೂ ಆಸ್ಟ್ರೇಲಿಯಾದ ಬ್ರೆಂಡನ್ ಸ್ಟಾರ್ಕ್‌ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.

ಕಳೆದ ಜೂನ್‌ನಲ್ಲಿ ಯುಜೀನ್‌ನಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ತೇಜಸ್ವಿನ್‌ ಶಂಕರ್ 2.27 ಮೀಟರ್ ಎತ್ತರಕ್ಕೆ ಜಿಗಿದಿದ್ದರು. ಅದೇ ಪ್ರದರ್ಶನವನ್ನು ತೇಜಸ್ವಿನ್, ಬರ್ಮಿಂಗ್‌ಹ್ಯಾಮ್‌ನಲ್ಲಿ ಮರುಕಳಿಸಿದ್ದರೇ ಚಿನ್ನದ ಪದಕ ತೇಜಸ್ವಿನ್ ಶಂಕರ್ ಪಾಲಾಗುತ್ತಿತ್ತು. ರಾಷ್ಟ್ರೀಯ ದಾಖಲೆ ಹೊಂದಿರುವ ತೇಜಸ್ವಿನ್ ಶಂಕರ್, ಹೈಜಂಪ್ ಫೈನಲ್‌ನ ಮೊದಲ ಪ್ರಯತ್ನದಲ್ಲೇ 2.22 ಮೀಟರ್ ಎತ್ತರ ಜಿಗಿಯುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಎರಡು ಬಾರಿ 2.25 ಮೀಟರ್ ಎತ್ತರ ಜಿಗಿಯುವಲ್ಲಿ ತೇಜಸ್ವಿನ್ ವಿಫಲರಾದರು. ತೇಜಸ್ವಿನ್‌ ವೃತ್ತಿಜೀವನದಲ್ಲಿ 2.29 ಮೀಟರ್ ಎತ್ತರ ಜಿಗಿದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.

ಆದರೆ, ಫೈನಲ್ ಪಂದ್ಯದಲ್ಲಿ ಶಂಕರ್ 2.22 ಮೀಟರ್ ಜಿಗಿದು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ವಿಶೇಷ ಎಂದರೆ ಕಾಮನ್‍ವೆಲ್ತ್ ಗೇಮ್ಸ್ ಇತಿಹಾಸದಲ್ಲಿ ಪುರುಷರ ಹೈ ಜಂಪ್ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕ ಇದಾಗಿದೆ. ತನ್ನ ಮೊದಲ ಪ್ರಯತ್ನದಲ್ಲಿ 2.10 ಮೀಟರ್ ಜಿಗಿದ ಶಂಕರ್ ಉತ್ತಮ ಆರಂಭ ಕಂಡರು. ಬಹಮಾಸ್ನ ಡೊನಾಲ್ಡ್ ಥೋಮಸ್ ಕೂಡ 2.22 ಮೀ. ಜಿಗಿದು ಶಂಕರ್ ಜೊತೆ ಸಮಬಲ ಸಾಧಿಸಿದರು. ಆದರೆ, ಶಂಕರ್ ಕೆಲ ಫೌಲ್ಗಳನ್ನು ಮಾಡಿದ ಕಾರಣ ಕಂಚಿನ ಪದಕಕ್ಕೆ ತೃಪ್ತಿ ಪಡಬೇಕಾಯಿತು.

ಈ ಮೂಲಕ ಕಾಮನ್ವೆಲ್ತ್ ಗೇಮ್ಸ್ 2022 ರಲ್ಲಿ ಭಾರತದ ಪದಕ ಸಂಖ್ಯೆ 18ಕ್ಕೆ ಏರಿದೆ. ಇದುವರೆಗೆ ಐದು ಚಿನ್ನ, 6 ಬೆಳ್ಳಿ ಮತ್ತು 7 ಕಂಚಿನ ಪದಕ ಭಾರತ ಬಾಚಿಕೊಂಡಿದೆ.

Exit mobile version