ತೈಲ ದರ ಏರಿಕೆ ವಿರೋಧಿಸಿ ಬೀದಿಗಳಿದ ಆಟೊ ಚಾಲಕರು

ವಿಜಯನಗರ (ಹೊಸಪೇಟೆ),ಫೆ.17: ಕೋವಿಡ್‌ ಲಾಕ್‌ಡೌನ್‌ನಿಂದ ಕೋಟ್ಯಾಂತರ ಜನ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಜನಸಾಮಾನ್ಯರನ್ನು ಮತ್ತಷ್ಟು ಕಷ್ಟಕ್ಕೆ ತಳ್ಳಿದೆ. ಆಟೊ ಚಾಲಕರು ಇದಕ್ಕೆ ಹೊರತಾಗಿಲ್ಲ. ಪೆಟ್ರೋಲ್‌, ಡೀಸೆಲ್‌ ಹಾಗೂ ವಾಹನ ಗ್ಯಾಸ್‌ ಸಿಲಿಂಡರ್‌ ದರ ಏರಿಕೆ ವಿರೋಧಿಸಿ ಫೆಡರೇಶನ್‌ ಆಫ್ ಆಟೊ ಡ್ರೈವರ್‌ ಯೂನಿಯನ್‌ನವರು ಬುಧವಾರ ನಗರದಲ್ಲಿ ಪ್ರತಿಭಟನೆ ಮಾಡಿದ್ದಾರೆ.

ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಸೇರಿದ ಯೂನಿಯನ್‌ನವರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ತೈಲ ದರ ಏರಿಕೆಯಾಗದಂತೆ ಕ್ರಮ ಕೈಗೊಳ್ಳದ್ದಕ್ಕೆ ಆಕ್ರೋಶ ಹೊರ ಹಾಕಿದರು. ಬಳಿಕ ಅಲ್ಲಿಂದ ಪ್ರಮುಖ ಮಾರ್ಗಗಳ ಮೂಲಕ ಮೂಲಸೌಕರ್ಯ ಅಭಿವೃದ್ಧಿ, ಹಜ್‌ ಮತ್ತು ವಕ್ಫ್‌ ಖಾತೆ ಸಚಿವ ಆನಂದ್‌ ಸಿಂಗ್‌ ಅವರ ರಾಣಿಪೇಟೆ ಕಚೇರಿ ವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿದರು.

ನಂತರ ಅವರ ಸಹಾಯಕರಿಗೆ ಬರೆದ ಮನವಿ ಪತ್ರ ಸಲ್ಲಿಸಿದರು. ಸಿಐಟಿಯು ಅಧ್ಯಕ್ಷೆ ನಾಗರತ್ನಮ್ಮ ಮಾತನಾಡಿ, ‘ಒಂದು ಸಲ ಅವಕಾಶ ಕೊಟ್ಟರೆ ದೇಶದ ಚಿತ್ರಣವೇ ಬದಲಿಸುತ್ತೇವೆ ಎಂದು ಬಿಜೆಪಿಯವರು ಹೇಳಿದ್ದರು. ಆದರೆ, ಆರು ವರ್ಷವಾದರೂ ಏನೂ ಕೆಲಸ ಮಾಡಿಲ್ಲ. ಪ್ರತಿ ದಿನ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಪ್ರತಿಯೊಂದಕ್ಕೂ ಪ್ರತಿಕ್ರಿಯಿಸುವ ಪ್ರಧಾನಿ ನರೇಂದ್ರ ಮೋದಿಯವರು ಬೆಲೆ ಏರಿಕೆ ಕುರಿತು ಮೌನ ವಹಿಸಿದ್ದಾರೆ’ ಎಂದು ಟೀಕಿಸಿದರು.

Exit mobile version