ಬುಟ್ಟಿ ಬದುಕು ಕಷ್ಟ..ಕಷ್ಟ ; ಇವರ ಜೊತೆ ಚೌಕಾಸಿ ಮಾಡೋ ಮುನ್ನ ಒಮ್ಮೆ ಯೋಚಿಸಿ!

basket story

ಬುಟ್ಟಿ ಬದುಕು ಕಷ್ಟ..ಕಷ್ಟ! ಇವರ ಜೊತೆ ಚೌಕಾಸಿ ಮಾಡೋ ಮುನ್ನ ಒಮ್ಮೆ ಯೋಚಿಸಿ. ಸಂಕಷ್ಟದಲ್ಲಿದ್ದಾರೆ ಬುಟ್ಟಿ ನೇಯುವವರು! ಕಸುಬುದಾರನಿಗೆ ಚಿಕ್ಕಾಸು, ದಲ್ಲಾಳಿಗೆ ದೊಡ್ಡ ಕಾಸು. ಬೆಂಗಳೂರಿನ ರಸ್ತೆ ಬದಿಗಳಲ್ಲಿ ಬುಟ್ಟಿ ಹೆಣೆದು ಜೀವನ ಸಾಗಿಸುವವರ ದಯನೀಯ ಬದುಕು ಹೇಗಿದೆ ನೋಡಿ. ಇವರ ಜೊತೆ ಚೌಕಾಸಿ ಮಾಡೋ ಮುನ್ನ ಹತ್ತು ಬಾರಿ ಯೋಚಿಸಿ. ಯಾಕಂದ್ರೆ ನೀವು ಕೊಡೋ ಒಂದೊಂದು ರೂಪಾಯಿ ಇವರ ಅನ್ನದ ಬಟ್ಟಲು ತುಂಬಿಸುತ್ತೆ ಅಷ್ಟೇ.

ಇದೇ ವಸ್ತುಗಳನ್ನು ನೀವು ಮಾಲ್‌ಗಳಲ್ಲೋ, ದೊಡ್ಡ ದೊಡ್ಡ ಶಾಪಿಂಗ್ ಸೆಂಟರ್‌ಗಳಲ್ಲಿ ವಾದ ಮಾಡದೇ ಒಂದಕ್ಕೆ ಎರಡು ಪಟ್ಟು ಕೊಟ್ಟು ಖರೀದಿಸ್ತೀರಿ. ಆಗ ದೊಡ್ಡವರ ದೊಡ್ಡತನಕ್ಕೆ ನೀವು ಪಾಲು ಕೊಟ್ಟ ಹಾಗಾಗುತ್ತೆ. ಹಾಗಾಗಿ ನೀವು ರಸ್ತೆ ಬದಿಯಲ್ಲಿ ಹೊಟ್ಟೆ ಬಟ್ಟೆ ಕಟ್ಟಿ ಬುಟ್ಟಿ ನೇಯುವವರ ಬಳಿ ವಸ್ತು ತೆಗೆದುಕೊಳ್ಳುವಾಗ ಬಾರ್ಗೈನ್ ಮಾಡದಿರಿ. ಬೆಂಗಳೂರಿನಂಥಾ ಮಹಾನಗರಗಳ ರಸ್ತೆ ಬದಿಯಲ್ಲಿ ಅಲ್ಲಲ್ಲಿ ನೀವು ಈ ರೀತಿ ಬುಟ್ಟಿ ಹೆಣೆಯುವವರನ್ನು ಕಾಣಬಹುದು.

ಇವರು ದೂರದ ಆಂದ್ರದಿಂದ ಕಚ್ಚಾ ವಸ್ತುಗಳನ್ನ ಹೊತ್ತು ತಂದು ಒಂದೆರೆಡು ತಿಂಗಳುಗಳ ಕಾಲ ಬೆಂಗಳೂರಿನ ರಸ್ತೆ ಬದಿಗಳಲ್ಲಿ ವಾಸಮಾಡುತ್ತಾರೆ. ಕಚ್ಚಾ ವಸ್ತುಗಳಿಂದ ಪುಟ್ಟಿಗಳನ್ನ ನಯವಾಗಿ ನಾಜೂಕಾಗಿ ತಮ್ಮ ಕೈಗಳಿಂದಲೇ ಹೆಣೆಯುತ್ತಾರೆ. ಬಿಗಿತಗಳನ್ನ ಪಟ್ಟು ಹಿಡಿಯುವ ಮೂಲಕ ಒಂದು ಆಕೃತಿಗೆ ತರುತ್ತಾರೆ. ಪುಟ್ಟಿಗಳು, ಹೂಗುಚ್ಚಗಳು ಇತರೆ ಅಲಂಕಾರಿಕ ವಸ್ತುಗಳನ್ನು ಇವರು ತಯಾರಿಸುತ್ತಾರೆ. ಆದ್ರೆ ಇತ್ತೀಚೆಗೆ ಜನರು ಕಡಿಮೆ ಬೆಲೆಗೆ ಸುಲಭವಾಗಿ ಕೈಗೆಟುಕುವ ಪ್ಲಾಸ್ಟಿಕ್ ಉತ್ಪನ್ನಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಹಾಗಾಗಿ ಇವರಿಗೆ ವ್ಯಾಪಾರ ಇಲ್ಲದೆ ಇವರ ಕುಲಕಸುಬೇ ವಿನಾಶದ ಅಂಚಿಗೆ ಬಂದಿದೆ.

ತಲೆ ಮೇಲೆ ಸೂರಿಲ್ಲ, ಮಾರಾಟಕ್ಕೆ ಜಾಗವಿಲ್ಲ! ಇನ್ನು ಇವರ ತಲೆಮೇಲೊಂದು ಸೂರಿಲ್ಲ. ತಯಾರಿಸಿದ ವಸ್ತುಗಳನ್ನು ಮಾರಲು ಅಂಗಡಿ ಮಳಿಗೆಗಳಿಲ್ಲ. ಹೆಚ್ಚು ದಿನ ರಸ್ತೆಯ ಫುಟ್ಪಾತಲ್ಲಿ ಇರಲು ಪೊಲೀಸರು ಬಿಡಲ್ಲ. ಹಾಗಾಗಿ ಇವರು ಅನಿವಾರ್ಯವಾಗಿ ದಲ್ಲಾಳಿಗಳಿಗೆ ತೋಚಿದ ಬೆಲೆಗೆ ಬುಟ್ಟಿಗಳನ್ನು ಮಾರಾಟ ಮಾಡುತ್ತಾರೆ. ದಲ್ಲಾಳಿಗಳೋ ಇವರಿಂದ ಚಿಕ್ಕಾಸು ಬೆಲೆ ಬುಟ್ಟಿ ಖರೀದಿಸಿ ಹೆಚ್ಚಿನ ಬೆಲೆಗೆ ಬೇರೆ ಬೇರೆ ಕಡೆ ಮಾರಾಟ ಮಾಡ್ತಿದ್ದಾರೆ. ಇದರಿಂದ ಇವರು ಬಡವರಾಗಿಯೇ ಉಳಿದಿದ್ದಾರೆ.

ಇನ್ನು ಇವರು ಫುಟ್ಪಾತೇ ಇವರ ಅರಸೋತ್ತು. ಚಿಕ್ಕ ಚಿಕ್ಕ ಮಕ್ಕಳನ್ನ ಜೊತೆಯಾಗಿ ಕರೆತರುತ್ತಾರೆ. ಈ ನತದೃಷ್ಟ ಮಕ್ಕಳಿಗೆ ವಿದ್ಯಾಭ್ಯಾಸವೂ ಇಲ್ಲ, ಸುಂದರ ಬಾಲ್ಯವೂ ಇಲ್ಲ. ಕುಲಕಸುಬನ್ನೇ ನಂಬಿ ಊರೂರು ಅಲೆಯುವ ಇವರ ಬದುಕು ಕೊರೋನಾ ನಂತ್ರ ಮೂರಾಬಟ್ಟೆಯಾಗಿದೆ. ಅದೆಷ್ಟೋ ಮಂದಿ ಕಸುಬನ್ನೇ ಬಿಟ್ಟು ಭಿಕ್ಷಾಟನೆ ಮಾಡುತ್ತಾ, ಕೂಲಿ ನಾಲಿ ಮಾಡುತ್ತಾ ಬದುಕುತ್ತಿದ್ದಾರೆ. ಸರ್ಕಾರ ಈಗಲಾದ್ರು ಎಚ್ಚೆತ್ತುಕೊಂಡು ಇಂಥಾ ಗುಡಿಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇವರ ಬಾಳಿಗೆ ಬೆಳಕಾಗಬೇಕು.

ಸರ್ಕಾರ ಗುಡಿಕೈಗಾರಿಕೆಗಳ ಪುನರುಜ್ಜೀವನಕ್ಕೆ ಹತ್ತು ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಆದ್ರೆ ಆ ಯೋಜನೆಗಳೆಲ್ಲಾ ಇಂಥಾ ನಿಜವಾದ ಕಸುಬುದಾರರಿಂದ ದೂರ ಉಳಿದಿರೋದು ದುರಂತವೇ ಸರಿ.

Exit mobile version