ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಸ್ಟ್ಯಾಲಿನ್ ಸರ್ಕಾರದಿಂದ ಜನತೆಗೆ ಕೊಡುಗೆಗಳ ಸಾಲು

ಚೆನ್ನೈ, ಮೇ. 07: ಚುನಾವಣೆ ವೇಳೆ ನೀಡಿದ್ದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಅಧಿಕಾರಕ್ಕೆ ಬಂದ ಮೊದಲ ದಿನವೇ ತಮಿಳುನಾಡಿನ ನೂತನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಐದು ಪ್ರಮುಖ ಘೋಷಣೆಗಳನ್ನು ಮಾಡಿದ್ದಾರೆ. ಇದರ ಜೊತೆಗೆ ಕೊರೋನಾ ವಿರುದ್ಧ ಹೋರಾಟಕ್ಕೆ ಬಿಪಿಎಲ್ ಕಾರ್ಡ್​​ದಾರರ ಪ್ರತಿ ಕುಟುಂಬಕ್ಕೆ ತಲಾ ₹ 4000 ಮೊತ್ತವನ್ನು ಕೋವಿಡ್ ಪರಿಹಾರ ನಿಧಿಯಾಗಿ ಕೊಡಲು ನಿರ್ಧರಿಸಿದ್ದು, ಸಹಾಯಧನದ ಮೊದಲ ಕಂತಾಗಿ ₹ 2000 ಇದೇ ತಿಂಗಳು ಎಲ್ಲ ಕುಟುಂಬಗಳಿಗೂ ಸಿಗಲಿದೆ.

ಮುಖ್ಯಮಂತ್ರಿ ಆರೋಗ್ಯ ವಿಮೆ ಯೋಜನೆಯನ್ನು ಕೋವಿಡ್ ಸಂಬಂಧಿತ ಖರ್ಚುಗಳಿಗೂ ವಿಸ್ತರಿಸಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರೂ ಸರ್ಕಾರ ಆ ಮೊತ್ತವನ್ನು ಭರಿಸಲಿದೆ. ಉದ್ಯೋಗಸ್ಥ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಬಸ್​ ಚಾರ್ಜ್​ನಿಂದ ಸಂಪೂರ್ಣ ವಿನಾಯ್ತಿ ಸಿಕ್ಕಿದೆ. ತಮಿಳುನಾಡು ಹಾಲು ಒಕ್ಕೂಟದಿಂದ (ಆವಿನ್) ಹಾಲಿನ ಮೇಲೆ 3 ರೂಪಾಯಿ ಕಡಿಮೆ ಮಾಡಿದ್ದಾರೆ. ಪ್ರತಿ ಜಿಲ್ಲೆಯಲ್ಲಿಯೂ ಕುಂದುಕೊರತೆ ಆಲಿಸಲು ಪ್ರತ್ಯೇಕ ಇಲಾಖೆಯನ್ನು ರಚಿಸಲು ಸ್ಟಾಲಿನ್ ಆದೇಶಿಸಿದ್ದಾರೆ.

ಮೊದಲ ದಿನವೇ ಐದು ಮಹತ್ವದ ಆದೇಶಗಳಿಗೆ ಸಹಿಹಾಕುವ ಮೂಲಕ ಕೆಲಸಕ್ಕೆ ಮೊದಲ ಮಣೆ ಎಂಬ ಸಂದೇಶವನ್ನು ಸ್ಟಾಲಿನ್ ರವಾನಿಸಿದ್ದಾರೆ. ತಮಿಳುನಾಡಿನಲ್ಲಿ ಸ್ಟಾಲಿನ್​​​ ಅವರನ್ನು ತೀವ್ರವಾಗಿ ವಿರೋಧಿಸಿದ್ದ ಬಿಜೆಪಿ ತನ್ನ ಮೈತ್ರಿಪಕ್ಷ ಎಐಎಡಿಎಂಕೆ ಜೊತೆಗೂಡಿ ಮುಂದಿನ ದಿನಗಳಲ್ಲಿ ಯಾವ ನಡೆಗೆ ಮುಂದಾಗಲಿದೆ ಎಂಬುದರ ಬಗ್ಗೆ ಕುತೂಹಲ ವ್ಯಕ್ತವಾಗಿದೆ.

Exit mobile version