ಕೊರೋನಾದಲ್ಲಿ ತಾಯಿ ಸತ್ತ ದುಃಖದಲ್ಲಿ ಆತ್ಮಹತ್ಯೆಗೆ ಶರಣಾದ ಮಕ್ಕಳು ಮತ್ತು ಪತಿ

ಆನೇಕಲ್, ಜೂ. 30: ಹೆಮ್ಮಾರಿ ಕೊರೊನಾ ಜನಸಾಮಾನ್ಯರ ಬದುಕಲ್ಲಿ ಬಿರುಗಾಳಿ ಎಬ್ಬಿಸಿದೆ. ಅದೆಷ್ಟೋ ಕುಟುಂಬಗಳು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿವೆ. ತಂದೆ-ತಾಯಿ ಇಬ್ಬರೂ ಕೊರೊನಾಗೆ ಬಲಿಯಾಗಿ ಮಕ್ಕಳು ಅನಾಥರಾಗಿದ್ದಾರೆ. ಇದೇ ರೀತಿ ಬೆಂಗಳೂರಿನ ಹೊರವಲಯ ಆನೇಕಲ್​​​ನಲ್ಲಿ ಕುಟುಂಬವೊಂದು ಸೋಂಕಿನಿಂದ ಸರ್ವನಾಶವಾಗಿದೆ. ತಂದೆ-ತಾಯಿ, ಇಬ್ಬರು ಹೆಣ್ಣು ಮಕ್ಕಳಿದ್ದ ಸುಂದರ ಕುಟುಂಬ ಇಂದು ಮಸಣ ಸೇರಿದೆ. ನೆಮ್ಮದಿಯಾಗಿದ್ದ ಬದುಕನ್ನು ವೈರಸ್​​​​​ ಅಲ್ಲೋಲ ಕಲ್ಲೋಲ ಮಾಡಿದೆ.

ಆನೇಕಲ್​​ ತಾಲೂಕಿನ ಅತ್ತಿಬೆಲೆಯಲ್ಲಿ ನೆಲೆಸಿದ್ದ ಸತೀಶ್​ ರೆಡ್ಡಿ​​ ಅವರ ಕುಟುಂಬಕ್ಕೆ ಕೊರೊನಾ ಯಮನಾಗಿ ಎಂಟ್ರಿ ಕೊಟ್ಟಿತ್ತು. ಸತೀಶ್​ ರೆಡ್ಡಿ​ ಅವರ ಪತ್ನಿ ಆಶಾ ಅವರ ಕೊರೊನಾ ರಿಪೋರ್ಟ್​​ ಪಾಸಿಟಿವ್​ ಬಂದಿತ್ತು. ಚಿಕಿತ್ಸೆಯ ಬಳಿಕವೂ ಚೇತರಿಸಿಕೊಳ್ಳದ ಆಶಾ ಅವರು ಮೇ 6ರಂದು ಕೊರೊನಾಗೆ ಬಲಿಯಾಗಿದ್ದರು. ಪತಿ, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದರು. ಪುಟ್ಟ ಕುಟುಂಬಕ್ಕೆ ಬರ ಸಿಡಿಲು ಬಡಿದಂತೆ ಆಗಿತ್ತು. ಪತ್ನಿಯನ್ನು ಕಳೆದುಕೊಂಡು ಸತೀಶ್​ ರೆಡ್ಡಿ ಕಂಗಾಲಾಗಿದ್ದರು. ತಾಯಿಯ ಸಾವಿನಿಂದ ಇಬ್ಬರು ಹೆಣ್ಣು ಮಕ್ಕಳು ಖಿನ್ನತೆಗೆ ಒಳಗಾಗಿದ್ದರು. ಮನೆಯ ಒಡತಿಯಿಲ್ಲದೆ ಮನೆ ಸೊರಗಿತ್ತು.

ಮೇ 6ರಂದು ಆಶಾ ಅವರು ಇಹಲೋಕ ತ್ಯಜಿಸಿದಾಗಿನಿಂದ ಪತಿ, ಮಕ್ಕಳು ಅವರಿಲ್ಲದೆ ಬದುಕಲು ಇನ್ನಿಲ್ಲದಂತೆ ಯತ್ನಿಸಿದ್ದಾರೆ. ದಿನಗಳು ಉರುಳಿ, ವಾರಗಳು ಕಳೆದರೂ ಆಶಾರ ಸಾವು ಅವರನ್ನು ಕಾಡುತ್ತಲೇ ಇತ್ತು. ತಂದೆ-ಮಕ್ಕಳು ಮೂವರು ಖಿನ್ನತೆಗೆ ಒಳಗಾಗಿದ್ದರು. ಆಶಾ ಅವರ ಸಾವನ್ನು ಅರಗಿಸಿಕೊಳ್ಳಲು ಅವರಿಗೆ ಸಾಧ್ಯವೇ ಆಗಲಿಲ್ಲ. ಕೊನೆಗೆ ಇಂದು ಮೂವರು ಒಂದು ಕೆಟ್ಟು ನಿರ್ಧಾರ ತೆಗೆದುಕೊಂಡು ಬಿಟ್ಟಿದ್ದಾರೆ.

ಪತಿ ಸತೀಶ್​ ರೆಡ್ಡಿ  (45) ಹಾಗೂ ಮಕ್ಕಳಾದ ಕೀರ್ತಿ(19) , ಮೊನಿಷಾ(17) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಮೂವರು ನೇಣಿಗೆ ಶರಣಾಗಿದ್ದಾರೆ. ಕೊರೊನಾದಿಂದ ಆಶಾ ಸಾವನ್ನಪ್ಪಿದ್ದಕ್ಕೆ ಖಿನ್ನತೆಗೆ ಒಳಗಾಗಿದ್ದ ಕುಟುಂಬ ಸಾವಿನ ಹಾದಿ ಹಿಡಿದುಬಿಟ್ಟಿದೆ. ಒಂದೇ ಕುಟುಂಬದ ಮೂವರ ಆತ್ಮಹತ್ಯೆ ಸುದ್ದಿ ಕೇಳಿ ಅಕ್ಕಪಕ್ಕದ ಮನೆಯವರು, ಸಂಬಂಧಿಕರು ದಿಗ್ಭ್ರಾಂತರಾಗಿದ್ದಾರೆ. ಸ್ಥಿತಿವಂತರಾಗಿದ್ದ ಕುಟುಂಬ ಕೊರೊನಾ ಕಾರಣದಿಂದ ದುರಂತ ಅಂತ್ಯ ಕಂಡಿದೆ.

Exit mobile version