ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ: ದಿಢೀರ್ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದ ದಿನೇಶ್ ಕಲ್ಲಹಳ್ಳಿ

ಬೆಂಗಳೂರು, ಮಾ. 05:  ರಮೇಶ್​ ಜಾರಕಿಹೊಳಿ ರಾಸಲೀಲೆ ಬಿಡುಗಡೆ ಮಾಡಿ ರಾಜಕೀಯ ಸಂಚಲನ ಮೂಡಿಸಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್​ ಕಲ್ಲಹಳ್ಳಿ ಇಂದು ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಪ್ರಕರಣ ಕುರಿತು ನಿನ್ನೆ ವಿಚಾರಣೆಗೆ ಹಾಜರಾಗುವಂತೆ ದಿನೇಶ್​ ಕಲ್ಲಹಳ್ಳಿಗೆ  ಕಬ್ಬನ್​​ ಪಾರ್ಕ್​ ಪೊಲೀಸರು ಸೂಚನೆ ನೀಡಿದ್ದರು. ಆದರೆ, ಅವರು ತಮಗೆ ಜೀವ ಬೆದರಿಕೆ ಇದ್ದು, ಭದ್ರತೆ ಇಲ್ಲದೇ ವಿಚಾರಣೆಗೆ ಹಾಜರಾಗುವುದು ಅಸಾಧ್ಯ ಎಂದು ಕಾರಣ ನೀಡಿ ಗೈರಾಗಿದ್ದರು. ಅಲ್ಲದೇ ಭದ್ರತೆ ನೀಡಿದ ಬಳಿಕ ಮಾ. 9ರಂದು ವಿಚಾರಣೆಗೆ ಹಾಜರಾಗುವುದಾಗಿ ಅವರು ತಿಳಿಸಿದ್ದರು. ಆದರೆ ಇಂದು ಅವರು ದಿಢೀರ್​ ಎಂದು ಪೊಲೀಸರ ಮುಂದೆ ಹಾಜರಾಗಿದ್ದು, ಪ್ರಕರಣದ ಕುರಿತು ಮಾಹಿತಿ ನೀಡುತ್ತಿದ್ದಾರೆ.

ಇನ್ನು ವಿಚಾರಣೆಗೂ ಮುನ್ನ ಮಾತನಾಡಿದ ಅವರು, ತನಿಖೆಗೆ ಸಹಕಾರ ಕೊಡಲೆಂದೇ ಬಂದಿದ್ದೇನೆ. ಪ್ರಕರಣದ ಇಂಚಿಂಚು ಮಾಹಿತಿ ನೀಡುತ್ತೇನೆ. ತನಿಖೆಗೆ ಪೂರಕ ಎಲ್ಲಾ ದಾಖಲೆ ತಂದಿದ್ದೇನೆ. ನನಗೆ ತಿಳಿದಿರುವ ಎಲ್ಲಾ ಮಾಹಿತಿ ಹೇಳುತ್ತೇನೆ ಎಂದರು.

ಸಿಡಿ ಸ್ಫೋಟ ಸಂಬಂಧಿಸಿದಂತೆ ಪೊಲೀಸರು ದಿನೇಶ್ ಕಲ್ಲಹಳ್ಳಿ ತೀವ್ರ ವಿಚಾರಣೆ ನಡೆಸಿರುವ ಪೊಲೀಸರು ಸಿಡಿ ಹಾಗೂ ಸಂತ್ರಸ್ತೆ ಕುರಿತು ಮಾಹಿತಿ ಕಲೆ ಹಾಕುವ ಪ್ರಯತ್ನ ನಡೆಸಿದ್ದಾರೆ. ವಿಡಿಯೋದಲ್ಲಿರುವ ಸಂತ್ರಸ್ತೆ ಬಗ್ಗೆ ಕೆಲ ಮಾಹಿತಿ ನೀಡಿದ ದಿನೇಶ್​, ಸಂಪೂರ್ಣ ಮಾಹಿತಿ ನೀಡಲು ಕೆಲ ಸಮಯ ಬೇಕು ಎಂದು ಅವಕಾಶವನ್ನು ತನಿಖಾಧಿಕಾರಿ ಬಳಿ ಕೇಳಿದ್ದಾರೆ.

ಇನ್ನು ಈ ಪ್ರಕರಣದ ಕುರಿತು ಮಾತನಾಡಿರುವ ನಗರ ಪೊಲೀಸ್​ ಆಯುಕ್ತ ಕಮಲ್​ಪಂತ್​, ಸಿಡಿ ಪ್ರಕರಣದಲ್ಲಿ ನಮ್ಮ ಅಧಿಕಾರಿಗಳು ಒಳ್ಳೆ ರೀತಿ ತನಿಖೆ ಮಾಡುತ್ತಿದ್ದಾರೆ. ಸದ್ಯ ವಿಚಾರಣೆ ಮಾಡ್ತಿದ್ಧೇವೆ, ಮುಂದೆ ಈ ಬಗ್ಗೆ ವಿವರಣೆ ನೀಡುತ್ತೇವೆ ಎಂದರು.


ಪ್ರಭಾವಿ ಸಚಿವರ ರಾಸಲೀಲೆ ಸಿಡಿ ತೊರೆಯುತ್ತಿದ್ದಂತೆ ಮಾರ್ಚ್​ 2 ರಂದು ದಿನೇಶ್​ ಕಲ್ಲಹಳ್ಳಿ ಸಂತ್ರಸ್ತೆಗೆ ನ್ಯಾಯ ಕೊಡಿಸುವ ಸಲುವಾಗಿ ದೂರು ದಾಖಲಿಸಿರುವುದಾಗಿ ತಿಳಿಸಿದರು. ಸಚಿವರು ಯುವತಿಗೆ ಕೆಲಸದ ಆಮಿಷವೊಡ್ಡಿ ಲೈಂಗಿಕವಾಗಿ ದೌರ್ಜನ್ಯ ನಡೆಸಿದ್ದಾರೆ. ಯುವತಿ ಮತ್ತು ಆ ಕುಟುಂಬಕ್ಕೆ ಜೀವ ಬೆದರಿಕೆಯಿದೆ. ಈ ಸಂಬಂಧ ಯುವತಿ ಕುಟುಂಬಸ್ಥರು ನನ್ನ ಗಮನಕ್ಕೆ ತಂದಿದ್ದು, ಯುವತಿಗೆ ನ್ಯಾಯಾ ದೊರಕಿಸುವ ನಿಟ್ಟಿನಲ್ಲಿ ತಾವು ದೂರು ಸಲ್ಲಿಸಿರುವುದಾಗಿ ತಿಳಿಸಿದ್ದರು. ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ, ರಮೇಶ್​ ಜಾರಕಿಹೊಳಿ ರಾಜೀನಾಮೆಗೆ ಪ್ರತಿಪಕ್ಷಗಳು ಆಗ್ರಹಿಸಿದ್ದವು. ಸಚಿವರು ಕೂಡ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದರು. ಇದಾದ ಬಳಿಕ ತಮಗೆ ಬೆದರಿಕೆ ಕರೆಗಳು ಬರುತ್ತಿವೆ. ತಮಗೆ ಸೂಕ್ತ ಭದ್ರತೆ ನೀಡಬೇಕು ಎಂದು ದಿನೇಶ್​ ಕಲ್ಲಹಳ್ಳಿ ರಾಮನಗರದಲ್ಲಿ ದೂರು ದಾಖಲಿಸಿದ್ದರು.

Exit mobile version