ಎರಡನೇ ಟಿ20: ಭಾರತದ ವಿರುದ್ಧ ಶ್ರೀಲಂಕಾಕ್ಕೆ 4 ವಿಕೆಟ್ ಜಯ: ಇಂದು ನಿರ್ಣಾಯಕ ಪಂದ್ಯ

ಕೊಲಂಬೊ: ಧನಂಜಯ ಡಿಸಿಲ್ವಾ(40) ಹಾಗೂ ಅಖಿಲ ಧನಂಜಯ(2ಕ್ಕೆ 29) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ 4 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.

ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ನೀಡಿದ 133 ರನ್ ಗಳ ಸುಲಭದ ಗುರಿ ಬೆನ್ನತ್ತಿದ ಶ್ರೀಲಂಕಾ, ಧನಂಜನಯ ಡಿಸಿಲ್ವಾ ಹಾಗೂ ಚಮಿಕಾ ಕರುಣಾರತ್ನೆ ಅವರು 7ನೇ ವಿಕೆಟ್ ಜೊತೆಯಾಟದ ನೆರವಿನೊಂದಿಗೆ ಗೆಲುವಿನ ದಡಸೇರಿತು. ಆ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-1ರ ಸಮಬಲ ಸಾಧಿಸಿತು.

ಜವಾಬ್ದಾರಿಯುತ ಆಟವಾಡಿದ ಧನಂಜಯ ಡಿಸಿಲ್ವಾ ಅಜೇಯ 40 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರೆ. ಇವರಿಗೆ ಸಾಥ್ ನೀಡಿದ ಕರುಣಾರತ್ನೆ ಅಜೇಯ 12 ರನ್ ಗಳಿಸಿ ಗೆಲುವಿಗೆ ನೆರವಾದರು. ಇದಕ್ಕೂ ಮುನ್ನ ಆರಂಭಿಕ ಆಟಗಾರ ಮಿನೋದ್ ಭನುಕಾ 36 ರನ್ಗಳ ಉಪಯುಕ್ತ ಕಾಣಿಕೆ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಟೀಂ ಇಂಡಿಯಾ ಬೌಲರ್ ಗಳ ಪೈಕಿ ಕುಲ್ದೀಪ್ ಯಾದವ್ 2 ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್, ಚೇತನ್ ಸಾಕರಿಯಾ, ವರುಣ್ ಚಕ್ರವರ್ತಿ ಹಾಗೂ ರಾಹುಲ್ ಚಹರ್ ತಲಾ 1 ವಿಕೆಟ್ ಪಡೆದರು ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

ಪ್ರಮುಖ ಆಟಗಾರರ ಅಲಭ್ಯ ಟೀಂ ಇಂಡಿಯಾದ ಆಲ್ರೌಂಡರ್ ಕೃನಾಲ್ ಪಾಂಡ್ಯಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಎರಡನೇ ಟಿ20 ಪಂದ್ಯದಲ್ಲಿ ಭಾರತದ ಪ್ರಮುಖ ಆಟಗಾರರು ಕಣಕ್ಕಿಳಿಯಲಿಲ್ಲ. ಪ್ರಮುಖವಾಗಿ ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್, ಯಜುವೇಂದ್ರ ಚಹಲ್, ಇಶಾನ್ ಕಿಶನ್ ಹಾಗೂ ಕೆ.ಗೌತಮ್ ಅವರುಗಳು ಟಿ20 ಸರಣಿಯಿಂದ ಹೊರಗುಳಿದ ಪರಿಣಾಮ ಭಾರತದ ಮೇಲೆ ಪರಿಣಾಮಬೀರಿತು.

ನಾಲ್ವರು ಹೊಸಬರಿಗೆ ಮಣೆ
ಕೋವಿಡ್-19ಗೆ ತುತ್ತಾಗಿರುವ ಕೃನಾಲ್ ಪಾಂಡ್ಯ ಅವರೊಂದಿಗೆ ಸಂಪರ್ಕ ಹೊಂದಿದ್ದ ಪರಿಣಾಮ ತಂಡದ ಪ್ರಮುಖ ಆಟಗಾರರು ಸರಣಿಯಿಂದ ಹೊರಗುಳಿದ ಹಿನ್ನೆಲೆಯಲ್ಲಿ ಎರಡನೇ ಟಿ20 ಪಂದ್ಯದಲ್ಲಿ ಭಾರತ ನಾಲ್ವರು ಹೊಸ ಆಟಗಾರರನ್ನ ಕಣಕ್ಕಿಳಿಸಿತು. ಆರು ಮಂದಿ ಬೌಲರ್ಗಳು ಹಾಗೂ ಐವರು ಬ್ಯಾಟ್ಸಮನ್ ಗಳೊಂದಿಗೆ ಕಣಕ್ಕಿಳಿದ ಭಾರತದ ಪರ ನಿತೀಶ್ ರಾಣಾ, ದೇವದತ್ ಪಡಿಕಲ್, ಋತುರಾಜ್ ಗಾಯಕ್ವಾಡ್ ಹಾಗೂ ಚೇತನ್ ಸಕಾರಿಯಾ ಟಿ20 ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದರು.

ಇಂದು ನಿರ್ಣಾಯಕ ಪಂದ್ಯ ಟಿ20 ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯ ಇಂದು ನಡೆಯಲಿದೆ.‌ ಸರಣಿಯಲ್ಲಿ ಈಗಾಗಲೇ 1-1ರ ಸಮಬಲ ಸಾಧಿಸಿರುವ ಎರಡು ತಂಡಗಳು ಇಂದಿನ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿವೆ. ಈಗಾಗಲೇ ಏಕದಿನ ಸರಣಿ ಗೆದ್ದಿರುವ ಭಾರತ ಟಿ20 ಸರಣಿಯನ್ನು ವಶಪಡಿಸಿಕೊಳ್ಳುವ ನಿರೀಕ್ಷೆ ಹೊಂದಿದ್ದರೆ, ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

Exit mobile version