ITR ಸಲ್ಲಿಕೆ ಗಡುವು ಜುಲೈ 31 ಅಂತ್ಯ ; ದಂಡ ಶುಲ್ಕವಿಲ್ಲದೆ ಯಾರೆಲ್ಲಾ ITR ಸಲ್ಲಿಸಬಹುದು ಗೊತ್ತಾ?

IT

ಆದಾಯ ತೆರಿಗೆ ರಿಟರ್ನ್(Income Tax Return) ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿತ್ತು. ಒಂದು ವೇಳೆ ಈ ಗಡುವಿನೊಳಗೆ(Deadline) ನೀವು ಆದಾಯ ತೆರಿಗೆ ರಿಟರ್ನ್ ಸಲ್ಲಿಸಿಲ್ಲ ಎಂದರೆ, ನಂತರವೂ ಐಟಿಆರ್‌(ITR) ಸಲ್ಲಿಸಬಹುದು. ಆದರೆ ಇದಕ್ಕೆ ದಂಡ ಶುಲ್ಕ(Penalty Charges) ಅಥವಾ ವಿಳಂಬ ಶುಲ್ಕ ಪಾವತಿಸಬೇಕು. ಆದರೂ, ಈ ದಂಡಶುಲ್ಕ ಪ್ರತಿಯೊಬ್ಬರಿಗೂ ಅನ್ವಯಿಸುವುದಿಲ್ಲ.

ಕೆಲವರು ಗಡುವಿನ ಅವಧಿ ಮುಗಿದರೂ, ದಂಡ ಶುಲ್ಕ ಪಾವತಿಸದೆ ತಮ್ಮ ಐಟಿಆರ್ ಸಲ್ಲಿಸಲು ಅವಕಾಶವಿದೆ. ಹಾಗಾದರೆ, ಗಡುವು ಮುಗಿದರೂ ಯಾರೆಲ್ಲ ದಂಡ ಶುಲ್ಕವಿಲ್ಲದೆ ಐಟಿಆರ್‌ ಸಲ್ಲಿಸಬಹುದು, ಇದಕ್ಕೆ ಸಂಬಂಧಿಸಿದಂತೆ ನಿಯಮ ಏನು ಹೇಳುತ್ತದೆ ಎನ್ನುವ ವಿವರ ಇಲ್ಲಿದೆ. ಮುಂದೆ ಓದಿ,


ಆದಾಯ ತೆರಿಗೆಯ ಸೆಕ್ಷನ್ 234 ಎಫ್(Section 234 F) ಅಡಿಯಲ್ಲಿ, ವ್ಯಕ್ತಿಯ ಆರ್ಥಿಕ ವರ್ಷದಲ್ಲಿನ ಒಟ್ಟು ಆದಾಯವು ಮೂಲ ವಿನಾಯಿತಿ ಮಿತಿಯನ್ನು ಮೀರದಿದ್ದರೆ, ಐಟಿಆರ್ ತಡವಾಗಿ ಸಲ್ಲಿಸಿದರೂ ದಂಡ ಪಾವತಿಸಬೇಕಾಗಿಲ್ಲ ಎಂದು ಆದಾಯ ತೆರಿಗೆ ತಜ್ಞರು ಹೇಳುತ್ತಾರೆ. ಸರಳವಾಗಿ ಹೇಳುವುದಾದರೆ, ಜುಲೈ 31ರ ನಂತರ 2.5 ಲಕ್ಷದವರೆಗಿನ ಆದಾಯ ಹೊಂದಿರುವವರು ಆದಾಯ ತೆರಿಗೆ ಸಲ್ಲಿಸಿದರೆ, ಆಗ ಯಾವುದೇ ರೀತಿಯ ದಂಡವನ್ನು ಪಾವತಿಸಬೇಕಾಗಿಲ್ಲ.

ಆದರೆ, ಪ್ರಸ್ತುತ ತೆರಿಗೆ ಕಾನೂನುಗಳ ಪ್ರಕಾರ, ಒಬ್ಬ ವ್ಯಕ್ತಿಗೆ ಅನ್ವಯವಾಗುವ ಮೂಲ ತೆರಿಗೆ ವಿನಾಯಿತಿ ಮಿತಿಯು ಆ ವ್ಯಕ್ತಿ ಆಯ್ಕೆ ಮಾಡಿದ ತೆರಿಗೆ ಪದ್ಧತಿಯನ್ನು ಅವಲಂಬಿಸಿರುತ್ತದೆ. ಒಬ್ಬ ವ್ಯಕ್ತಿಯು ಹೊಸ ತೆರಿಗೆ ಪದ್ಧತಿ ಆರಿಸಿಕೊಂಡರೆ, ಅವರ ವಯಸ್ಸನ್ನು ಪರಿಗಣಿಸದೆ ಮೂಲ ವಿನಾಯಿತಿ ಮಿತಿ ₹ 2.5 ಲಕ್ಷವಾಗಿರುತ್ತದೆ.


ಅದೇ ರೀತಿ, ಯಾರಾದರೂ ಹಳೆಯ ತೆರಿಗೆ ಪದ್ಧತಿಯನ್ನು ಆರಿಸಿದರೆ, 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಈ ವಿನಾಯಿತಿಯು 2.5 ಲಕ್ಷ ರೂ. ಆಗಿರುತ್ತದೆ. 60 ವರ್ಷ ಅಥವಾ ಅದಕ್ಕಿಂತ ಹೆಚ್ಚು ಮತ್ತು 80 ವರ್ಷಕ್ಕಿಂತ ಕಡಿಮೆ ಇರುವವರಿಗೆ 3 ಲಕ್ಷದವರೆಗಿನ ಆದಾಯವು ತೆರಿಗೆ ಮುಕ್ತವಾಗಿದೆ. 80 ವರ್ಷ ಮೇಲ್ಪಟ್ಟವರಿಗೆ ಮೂಲ ವಿನಾಯಿತಿ ಮಿತಿ 5 ಲಕ್ಷ ಆಗಿರುತ್ತದೆ.

Exit mobile version