ಪನ್ನೀರ್ ಪರಿಶುದ್ಧತೆಯನ್ನು ಪರೀಕ್ಷಿಸಲು ಈ ಟ್ರಿಕ್ಸ್ ಫಾಲೋ ಮಾಡಬಹುದು..

ಪನೀರ್ ನ್ನು ಇಷ್ಟಪಡದವರು ಸಿಗುವುದು ತೀರಾ ಕಡಿಮೆ. ಅದರಲ್ಲೂ ವೆಜ್ ಪ್ರಿಯರ ಫೇವರೆಟ್ ಫುಡ್ ಎಂದರೆ ಪನ್ನೀರ್. ಆದರೆ ಇದೇ ಪನ್ನಿರ್ ನಕಲಿಯಾಗಿದ್ದರೆ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಎಲ್ಲವೂ ಕಲಬೆರಕೆ ಆಗಿರುವ ಈ ಕಾಲದಲ್ಲಿ ಪನ್ನೀರ್ ಖರೀದಿಸುವಾಗ ಅಸಲಿ ಮತ್ತು ನಕಲಿ ನಡುವಿನ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ ಕೇವಲ ಪನ್ನೀರ್ ನೋಡಿ ಅಷ್ಟೇ ಅದರ ಶುದ್ಧತೆಯನ್ನ ಕಂಡುಹಿಡಿಯುವುದು ತುಂಬಾ ಕಷ್ಟ. ಇಂತಹ ಸಂದರ್ಭದಲ್ಲಿ ನಿಮಗೆ ಕಲಬೆರಕೆ ಆಗಿದೆ ಎಂದು ಸಂಶಯವಿದ್ದಾಗ ಈ ಟೆಕ್ನಿಕ್ ಗಳನ್ನು ಪ್ರಯತ್ನಿಸಬಹುದು.

ಪನ್ನೀರಿನ ಶುದ್ಧತೆಯನ್ನು ಪರೀಕ್ಷಿಸುವಂತಹ ಮಾರ್ಗಗಳನ್ನು ಈ ಕೆಳಗೆ ನೀಡಲಾಗಿದೆ:

ಕೈಯಲ್ಲೇ ಬೆರೆಸಿ:
ಪನ್ನೀರ್ ಅಸಲಿ ಅಥವಾ ನಕಲಿ ಎಂದು ತಿಳಿಯುವ ಮೊದಲ ವಿಧಾನವೆಂದರೆ ನಿಮ್ಮ ಕೈಯಲ್ಲಿ ಪನೀರ್ ತುಂಡನ್ನು ಬೆರೆಸಲು ಪ್ರಯತ್ನಿಸಿ. ಅಂದರೆ ಯಾವುದಾದರೂ ಅಡುಗೆ ಮಾಡುವಾಗ ಯಾವುದೇ ಚಮಚ ಬಳಸದೇ ಕೈ ಬಳಸಿ ಮಿಕ್ಸ್ ಮಾಡಿ. ಪನೀರ್ ಬೇರ್ಪಡಲು ಪ್ರಾರಂಭಿಸಿದರೆ ಪನೀರ್ ನಕಲಿ, ಏಕೆಂದರೆ ಅದರಲ್ಲಿರುವ ಕೆನೆರಹಿತ ಹಾಲಿನ ಪುಡಿ ಹೆಚ್ಚು ಒತ್ತಡವನ್ನು ಸಹಿಸುವುದಿಲ್ಲ, ಆದ್ದರಿಂದ ಪನ್ನೀರ್ ಕಲಸಿದಾಗ ಅದು ಬೇರ್ಪಟ್ಟು ಪುಡಿಯಾಗಲು ಪ್ರಾರಂಭವಾಗುವುದು. ಕಲಸಿದಾಗ ತುಂಡಾಗದೇ ಇದ್ದರೆ ಅದು ಶುದ್ಧ ಪನ್ನೀರ್ ಎಂದರ್ಥ.

ಅಯೋಡಿನ್ ಟಿಂಚರ್:
ಮೊದಲಿಗೆ ಪನೀರ್ ಅನ್ನು ನೀರಿನಲ್ಲಿ ಕುದಿಸಿ, ನಂತರ ತಣ್ಣಗಾಗಿಸಿ. ಈಗ ಈ ಪನೀರ್ ಗೆ ಕೆಲವು ಹನಿ ಅಯೋಡಿನ್ ಟಿಂಚರ್ ಹಾಕಿ. ಈ ಅಯೋಡಿನ್ ಟಿಂಚರ್ ಹಾಕಿದಾಗ ಪನೀರ್ ನೀಲಿ ಬಣ್ಣಕ್ಕೆ ತಿರುಗಿದರೆ, ಅದು ಕಲಬೆರಕೆಯಾಗಿದೆ ಎಂದರ್ಥ. ಇಂತಹ ಫಲಿತಾಂಶ ಸಿಕ್ಕಾಗ ಆ ಪನ್ನೀರನ್ನು ತಿನ್ನುವ ಸಾಹಸ ಮಾಡಬೇಡಿ. ನಿಮ್ಮ ಆರೋಗ್ಯ ಕೆಡುವುದರಲ್ಲಿ ಯಾವುದೇ ಸಂದೇಹವಿಲ್ಲ.

ನೈಸರ್ಗಿಕ ದಾರಿ:
ಶುದ್ಧವಾದ ಪನ್ನೀರ್ ಸಾಮಾನ್ಯವಾಗಿ ಗಟ್ಟಿಯಾಗಿರುವುದಿಲ್ಲ. ಬಾಯಿಗೆ ಇಟ್ಟಾಗ ಸುಲಭವಾಗಿ ಕರಗಿ ಹೋಗುವುದು. ಆದರೆ ಕಲಬೆರಕೆ ಮಾಡಿದ ಪನೀರ್ ಗಟ್ಟಿ ಅಥವಾ ಕಠಿಣವಾಗಿರುತ್ತದೆ. ಅಷ್ಟೇ ಅಲ್ಲ ಪನ್ನೀರ್ ತಿನ್ನುವಾಗ ರಬ್ಬರ್‌ನಂತಹ ಫೀಲ್ ಬರುವುದು. ರಬ್ಬರ್ ನಂತೆ ವಿಸ್ತರಣೆಯೂ ಆಗುವುದು. ತಿಂದಾಗ ರಬ್ಬರ್ ನಂತಾಗುವ ಪನ್ನೀರ್ ಶುದ್ಧವಲ್ಲ.

ಸೋಯಾಬೀನ್:
ಪನ್ನೀರ್ ನ ಕಲಬೆರಕೆ ತಡೆಯಲು ನೀವು ಪನೀರ್ ಕುದಿಸಿ ತಣ್ಣಗಾಗಿಸಿ. ನಂತರ ಇದಕ್ಕೆ ಸೋಯಾಬೀನ್ ಸೇರಿಸಿ ಮತ್ತು 10 ನಿಮಿಷಗಳ ನಂತರ ಪರಿಶೀಲಿಸಿ. ಪನೀರ್‌ನ ಬಣ್ಣ ಕ್ರಮೇಣ ಕೆಂಪು ಬಣ್ಣಕ್ಕೆ ತಿರುಗಿದರೆ ಅದು ನಕಲಿಯಾಗಿದೆ. ಕೆಂಪು ಬಣ್ಣಕ್ಕೆ ತಿರುಗಿದ ಅರ್ಥ ಪನೀರ್‌ನಲ್ಲಿ ಡಿಟರ್ಜೆಂಟ್ ಅಥವಾ ಯೂರಿಯಾ ಬೆರೆಸಲ್ಪಟ್ಟಿದೆ ಎಂದು. ಆದ್ದರಿಂದ ಈ ಪನ್ನೀರ್ ತಿನ್ನದೇ ಇರುವುದು ಉತ್ತಮ.

ಎಚ್ಚರವಿರಲಿ:
ಪನ್ನೀರ್ ಪ್ರಿಯರು ಬೀದಿ ಬದಿ ತಿನ್ನುವಾಗ ಎಚ್ಚರಿಕೆ ವಹಿಸಿ. ಏಕೆಂದರೆ ಅವರು ಬಳಸುವ ಪನ್ನೀರ್ ಯಾವ ಗುಣಮಟ್ಟದ್ದು ಎಂಬುದು ಯಾರಿಗೂ ತಿಳಿದಿರುವುದಿಲ್ಲ. ಒಂದು ವೇಳೆ ಕಲಬೆರಕೆ ಮಾಡಿದ ಪನ್ನೀರ್ ಸೇವಿಸಿದರೆ ಹೊಟ್ಟೆ ನೋವು, ತಲೆನೋವು ಮತ್ತು ಚರ್ಮ ರೋಗಗಳು ಉಂಟಾಗಬಹುದು. ಇದು ಹೆಚ್ಚಾಗಿ ಟೈಫಾಯಿಡ್, ಕಾಮಾಲೆ, ಹುಣ್ಣು, ಅತಿಸಾರಕ್ಕೆ ಕಾರಣವಾಗುತ್ತದೆ. ಆದ್ದರಿಂದ ಪನ್ನೀರ್ ತಿನ್ನುವಾಗ ಎಚ್ಚರಿಕೆಯಿಂದಿರಿ ಜೊತೆಗೆ ಆದಷ್ಟು ಮನೆಯಲ್ಲಿಯೇ ತಯಾರಿಸಿದ ಪನ್ನೀರ್ ಆಹಾರ ಸೇವಿಸಿ.

Exit mobile version