ಪ್ರತಿ ಹುಲಿಯ ಮೈ ಮೇಲಿರುವ ಪಟ್ಟಿ ಒಂದಕ್ಕಿಂತ ಒಂದು ವಿಭಿನ್ನವಾಗಿರುತ್ತದೆ!

Tiger

ಹುಲಿ(Tiger) ಎಂದಿಗೂ ಗುಂಪಿನಲ್ಲಿ ವಾಸಿಸುವ ಪ್ರಾಣಿಯಲ್ಲ, ಸಹಜವಾಗಿ ಅದು ಒಂಟಿ ಜೀವಿ. ಅದು ಹೆಚ್ಚಾಗಿ ತನ್ನ ಮರಿಗಳೊಂದಿಗೆ ಕಾಣಿಸಿಕೊಳ್ಳುತ್ತದೆಯೇ ವಿನಃ ಬೇರೆ ಯಾವುದೇ ಕಾಡು ಪ್ರಾಣಿಗಳೊಂದಿಗೆ ಸೇರುವುದಿಲ್ಲ.


ತಾಯಿ ಹುಲಿ ತನ್ನ ಮರಿಗಳ ಸಂರಕ್ಷಣೆಯಲ್ಲಿ ಬಹಳ ಎಚ್ಚರಿಕೆಯಿಂದ ಇರುತ್ತದೆ. ಎರಡು ವರ್ಷ ಮರಿಗಳನ್ನು ತನ್ನಲ್ಲಿ ಇರಿಸಿಕೊಂಡು ಜೋಪಾನ ಮಾಡುತ್ತದೆ. ಈ ವೇಳೆ ಆಹಾರ ಹುಡುಕುವುದು ಸೇರಿ, ಬದುಕುವ ಎಲ್ಲಾ ಕಲೆಗಳನ್ನು ಮರಿಗಳಿಗೆ ಕಲಿಸಿಕೊಡುತ್ತದೆ. ಜೊತೆಗೆ ಬೇರೆ ಹುಲಿಗಳಿಂದ ಎದುರಾಗುವ ಆಕ್ರಮಣ ಅಥವಾ ದಾಳಿಯಿಂದ ತಪ್ಪಿಸಿಕೊಳ್ಳುವ ಕಲೆಯನ್ನು ತಾಯಿ ಹುಲಿ ಕಲಿಸಿಕೊಡುತ್ತದೆ
ಹುಲಿ ಮರಿಗಳು ಹೆಚ್ಚು ಕಾಲ ತಮ್ಮ ತಾಯಿ ಮೇಲೆ ಅವಲಂಬಿತವಾಗುವುದಿಲ್ಲ.

ಅವುಗಳ ಸ್ವತಂತ್ರವಾಗಿ ಬದುಕಲು ಬಯಸುತ್ತವೆ. ಸುಮಾರು 2 ವರ್ಷಗಳ ಕಾಲವಷ್ಟೇ ತಾಯಿಯ ಆಶ್ರಯದಲ್ಲಿ ಬದುಕುತ್ತವೆ. ಬಳಿಕ ಸ್ವಚ್ಛಂದವಾಗಿ ಕಾಡಿನಲ್ಲಿ ಬೇಟೆಯಾಡುತ್ತಾ ಜೀವಿಸುತ್ತವೆ.
ಹುಲಿಗಳು ನುರಿತ ಈಜುಗಾರರು. ಹೌದು, ತಮ್ಮ ಬೇಟೆಗಾಗಿ ಎಷ್ಟು ದೂರದವರೆಗೆ ಬೇಕಾದರೂ ಈಜಬಲ್ಲವಂತೆ. ಕೆಲವೊಮ್ಮೆ ತಮ್ಮ ಬೇಟೆಯನ್ನು ಹುಡುಕುತ್ತಾ ನದಿಗಳನ್ನೇ ದಾಟಿ ಹೋಗುತ್ತವಂತೆ. ಹುಲಿಗಳಿಗೆ ನೀರಿನಲ್ಲಿ ಆಟವಾಡುವುದು ತುಂಬಾ ಅಚ್ಚುಮೆಚ್ಚು. ಸಾಮಾನ್ಯವಾಗಿ ಹುಲಿಯ ಗರ್ಭಧಾರಣೆ ಸುಮಾರು 90-110 ದಿನಗಳು.

ಒಂದು ಹೆಣ್ಣು ಹುಲಿ ಒಮ್ಮೆಗೆ 2-3 ಅಥವಾ 3-4 ಮರಿಗಳನ್ನು ಹಾಕುತ್ತದೆ. ಗಂಡು ಹುಲಿಗಳು 3 ವರ್ಷಕ್ಕೆ ಲೈಂಗಿಕ ಪ್ರಬುದ್ಧತೆಯನ್ನು ಸಾಧಿಸಿದರೆ, ಹೆಣ್ಣು ಹುಲಿಗಳು 4 ವರ್ಷಕ್ಕೆ ಲೈಂಗಿಕ ಪ್ರಬುದ್ಧತೆಯನ್ನು ಹೊಂದುತ್ತವೆ. ಇನ್ನು, ಹುಲಿಗಳ ಲಾಲಾರಸವು ನಂಜುನಿರೋಧಕ ಗುಣವನ್ನು ಹೊಂದಿದೆಯಂತೆ. ಇದಕ್ಕಾಗಿಯೇ ಹುಲಿಗಳು ತಮ್ಮ ಗಾಯಗಳನ್ನು ವಾಸಿಮಾಡಿಕೊಳ್ಳಲು ನೆಕ್ಕುತ್ತವೆ. ಹುಲಿಗಳ ರಾತ್ರಿ ದೃಷ್ಟಿ ಮನುಷ್ಯರಿಗಿಂತ 6 ಪಟ್ಟು ಉತ್ತಮವಾಗಿದೆ. ಹುಲಿಗಳು ಸಾಮಾನ್ಯವಾಗಿ ರಾತ್ರಿಯಲ್ಲಿ ಹೆಚ್ಚು ಬೇಟೆಯಾಡುತ್ತವೆ. ಹಾಗೇ ಹಗಲು ಹೊತ್ತಿನಲ್ಲಿ ಕೂಡ ಚುರುಕಾಗಿ ಬೇಟೆಯಾಡುವ ಸಾಮರ್ಥ್ಯವಿದೆ.


ಇನ್ನು, ಸಂಪೂರ್ಣ ಮತ್ತು ಸಧೃಢವಾಗಿ ಬೆಳೆದ ಹುಲಿಗಳು 310-660 ಪೌಂಡ್​ ತೂಕ ಇರುತ್ತದೆ. ಒಂದು ವಯಸ್ಕ ಹುಲಿ ಒಂದು ಹೊತ್ತಿಗೆ 80 ಪೌಂಡ್​​ಗಿಂತ ಹೆಚ್ಚು ಮಾಂಸವನ್ನು ತಿನ್ನುತ್ತದೆ.
ಹುಲಿಗಳ ಬಗ್ಗೆ ಅತ್ಯಂತ ಕುತೂಹಲಕಾರಿ ವಿಷಯ ಅಂದ್ರೆ, ಹುಲಿಯ ಚರ್ಮದ ಮಾದರಿಯು ಎಂದಿಗೂ ಪುನರಾವರ್ತನೆಯಾಗುವುದಿಲ್ಲ, ಇದು ಮಾನವ ಬೆರಳಚ್ಚಿನಂತೆ. ಪ್ರತಿ ಹುಲಿಯ ಚರ್ಮದ ಪಟ್ಟೆಗಳು ವಿಭಿನ್ನವಾಗಿರುತ್ತವೆ. ಹುಲಿ ಮರಿ ಗಂಡು ಮತ್ತು ಹೆಣ್ಣು ಎರಡರಿಂದಲೂ ಪಟ್ಟೆಗಳ ಮಾದರಿಯನ್ನು ಪಡೆದುಕೊಳ್ಳುತ್ತದೆ, ಮತ್ತು ನಂತರ ವಯಸ್ಸಿನೊಂದಿಗೆ,

ಈ ಮಾದರಿಯು ಬದಲಾಗುತ್ತದೆ. ಆದ್ದರಿಂದ ಪ್ರತಿ ಹುಲಿಯು ವಿಶಿಷ್ಟವಾದ ಪಟ್ಟೆಗಳನ್ನು ಹೊಂದಿರುತ್ತದೆ.

Exit mobile version