ಸರ್ಕಾರದ ವಿರುದ್ಧ ಸಾರಿಗೆ ನೌಕರರ ಅಸಮಾಧಾನ: ನಾಳೆ ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ

ಬೆಂಗಳೂರು, ಏ. 06: ಸಾರಿಗೆ ನೌಕರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಏ.7 ರಂದು ಮುಷ್ಕರ ನಡೆಸುವುದು ನಿಶ‍್ಚಿತ ಎಂದು ಸಾರಿಗೆ ನೌಕರರ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ತಿಂಗಳ ಹಿಂದೆ ಬೇಡಿಕೆ ಈಡೇರಿಕೆ ಆಗ್ರಹಿಸಿ ಮುಷ್ಕರ ನಡೆಸಿದ್ದೆವು. ಆ ಸಂದರ್ಭ ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಸರ್ಕಾರ ನೀಡಿತ್ತು. ಆದರೆ, ಇದುವರೆಗೆ ಸರ್ಕಾರ ಬೇಡಿಕೆ ಈಡೇರಿಸುವ ಕಡೆಗೆ ಆಸಕ್ತಿ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ರಾಜ್ಯ ಸರ್ಕಾರ ಡಿ.14 ರಂದು ಲಿಖಿತ  ಭರವಸೆ ನೀಡಿತ್ತು. ಬೇಡಿಕೆ ಈಡೇರಿಸಲು ಮೂರು ತಿಂಗಳ ಕಾಲಾವಕಾಶ ನೀಡಬೇಕೆಂದು ಸರ್ಕಾರ ಕೋರಿಕೊಂಡಿತ್ತು. ಇದೀಗ ಮೂರು ತಿಂಗಳು ಕಳೆದರೂ ಭರವಸೆ ಈಡೇರಿಸುವ ಲಕ್ಷಣಗಳು ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅನಿವಾರ್ಯ ಕಾರಣದಿಂದ ಮುಷ್ಕರ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಸಾರಿಗೆ ನೌಕರರ 8 ಬೇಡಿಕೆಗಳನ್ನು ಈಗಾಗಲೇ ಈಡೇರಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಬೇಡಿಕೆ ಈಡೇರಿಸಿದ ಬಗ್ಗೆ ಸರಿಯಾದ ಮಾಹಿತಿ ನಮಗೆ ಇಲ್ಲ. ಹೀಗಾಗಿ ನಾಳೆ ಮುಷ್ಕರ ನಡೆಸುವುದು ನಿಶ‍್ಚಿತ ಎಂದರು.

ಮಧ್ಯಾಹ್ನದಿಂದಲೇ ಮುಷ್ಕರ
ಈ ನಡುವೆ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಮುಷ್ಕರ ನಡೆಸಲು ಮಂದಾಗಿರುವ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನದಿಂದಲೇ ಬಿಎಂಟಿಸಿ ಬಸ್ ಸಂಚಾರ ನಡೆಸುವುದು ಅನುಮಾನವಾಗಿದೆ. 6ನೇ ವೇತನ ಆಯೋಗದ ವರದಿ ಜಾರಿಗೆ ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ಕಾರಣಕ್ಕೆ ಬುಧವಾರ ರಾಜ್ಯಾದ್ಯಂತ ಪ್ರತಿಭಟನೆಗೆ ಇಳಿಯಲಿರುವ ಸಾರಿಗೆ ನೌಕರರು ಅನಿರ್ದಿಷ್ಟ ಚಳುವಳಿಗೆ ಸಜ್ಜಾಗಿದ್ದಾರೆ. BMTC, KSRTC, NWKRTC, NEKRTC ಸಿಬ್ಬಂದಿ ಕುಟುಂಬ ಸಮೇತರಾಗಿ ಮುಷ್ಕರದಲ್ಲಿ ಭಾಗಿಯಾಗಲು ನಿರ್ಧರಿಸಿದ್ದಾರೆ.

Exit mobile version