ರಾಕಿಂಗ್ ಸ್ಟಾರ್(Rocking Star) ಯಶ್(Yash) ಅಭಿನಯದ ಬಹುನಿರೀಕ್ಷಿತ ಕೆಜಿಎಫ್ 2(KGF 2) ಸುದೀರ್ಘ ಕಾಯುವಿಕೆಯ ನಂತರ ಥಿಯೇಟರ್‌ಗಳನ್ನು ತಲುಪಿ ಆರ್ಭಟಿಸುತ್ತಿದೆ.

ಚಿತ್ರವನ್ನು ವೀಕ್ಷಿಸಿದ ದಿಗ್ಗಜರು ಚಿತ್ರತಂಡದ ಪರಿಶ್ರಮಕ್ಕೆ, ದೊಡ್ಡ ಚಿತ್ರವೊಂದನ್ನು ವಿಶಿಷ್ಟವಾಗಿ ನಿರ್ಮಾಣ ಮಾಡಿದ ರೀತಿಗೆ ಮನಸೋತಿದ್ದಾರೆ. ಹೆಚ್ಚು ಕಡಿಮೆ ಎಲ್ಲಾ ಭಾಷೆಯ ಘಟಾನುಘಟಿ ಕಲಾವಿದರು ಕೆಜಿಎಫ್ 2 ಗೆ ಮನಸೋತಿದ್ದಾರೆ. ಮಾಧ್ಯಮಗಳ ಮೂಲಕ ಕೆಜಿಎಫ್ 2 ಸಿನಿಮಾ ಹಾಗೂ ರಾಕಿಂಗ್ ಸ್ಟಾರ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಎರಡು ದಿನಗಳಲ್ಲಿ ಚಿತ್ರ ಭಾರತದಲ್ಲಿ ಬರೋಬ್ಬರಿ 240 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ವಿಚಾರ ತಿಳಿದು ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಬಾಲಿವುಡ್‌ನಲ್ಲಂತೂ ‘ಕೆಜಿಎಫ್ ಚಾಪರ್ 2’ ಸಿನಿಮಾ ಅಕ್ಷರಶಃ ಸುನಾಮಿಯನ್ನೇ ಸೃಷ್ಟಿಸಿದೆ. ಕೆಜಿಎಫ್ ಆರ್ಭಟಕ್ಕೆ ಅಂಜಿ ಕೆಲ ಸಿನಿಮಾಗಳು ಬಿಡುಗಡೆಯ ದಿನಾಂಕವನ್ನೇ ಮುಂದೂಡಿವೆ. ಇದೀಗ ಕೆಜಿಎಫ್-2 ಬಗ್ಗೆ ವಿಶೇಷ ಮಾಹಿತಿ ತಿಳಿದುಬಂದಿದೆ. ಸೂಪರ್ ಸ್ಟಾರ್ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ 2 ಎಡಿಟಿಂಗ್ ಮಾಡಲು ಕೇವಲ 19 ವರ್ಷದ ಉಜ್ವಲ್ ಕುಲಕರ್ಣಿಯನ್ನು(Ujwal Kulkarni) ಆಯ್ಕೆ ಮಾಡಿದ್ದರು. ಆತನ ಮೇಲೆ ನಂಬಿಕೆ ಇಟ್ಟು ಇಷ್ಟು ದೊಡ್ಡ ಜವಾಬ್ದಾರಿಯನ್ನು ವಹಿಸಿದ್ದರು. ಸಿಕ್ಕ ಅವಕಾಶವನ್ನ ಬಾಚಿ ತಬ್ಬಿಕೊಂಡ ಉಜ್ವಲ್, ತಮ್ಮ ಜವಾಬ್ದಾರಿಯನ್ನು ಇಂದು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಇನ್ನೂ ಆಶ್ಚರ್ಯವಾಗೋ ವಿಷಯ ಅಂದ್ರೆ ಉಜ್ವಲ್ ಗೆ ಕೆಜಿಎಫ್-2 ಚೊಚ್ಚಲ ಸಿನಿಮಾ. ಈ ಮೊದಲು ಯಾವ ಸಿನಿಮಾವನ್ನು ಎಡಿಟ್ ಮಾಡಿರಲಿಲ್ಲ. ಮೊದಲ ಸಿನಿಮಾವೇ ಕೆಜಿಎಫ್-2 ಆಗಿರುವುದು ಉಜ್ವಲ್ ಕುಲಕರ್ಣಿ ವೃತ್ತಿ ಜೀವನದ ಒಂದು ದೊಡ್ಡ ಮೈಲಿಗಲ್ಲು ಹಾಗೇ ಅದೃಷ್ಟ ಕೂಡ. ಉಜ್ವಲ್ ಈ ಹಿಂದೆ ಫ್ಯಾನ್ ವಿಡಿಯೋಗಳನ್ನು ಎಡಿಟ್ ಮಾಡುತ್ತಿದ್ದರು. ಬಳಿಕ ಯೂಟ್ಯೂಬ್ ವೀಡಿಯೋಗಳನ್ನು ಎಡಿಟ್ ಮಾಡಿಕೊಡುತ್ತಿದ್ದರು. ಹೀಗೆ ಒಮ್ಮೆ ‘ಕೆಜಿಎಫ್’ ಸಿನಿಮಾದ ವಿಡಿಯೋ ಎಡಿಟ್ ಮಾಡಿದ್ದರು, ಅದು ಪ್ರಶಾಂತ್ ನೀಲ್ ಪತ್ನಿಯ ಕಣ್ಣಿಗೆ ಬಿದ್ದಿತ್ತು.
ಅವರು ಅದನ್ನು ಪ್ರಶಾಂತ್ ಅವ್ರಿಗೆ ತೋರಿಸಿದಾಗ, ಅಚ್ಚರಿಗೊಂಡ ಪ್ರಶಾಂತ್ ಅವರು ಉಜ್ವಲ್ ನನ್ನು ಸಂಪರ್ಕಿಸಿ ಕೆಜಿಎಫ್ 2 ಸಿನಿಮಾದ ಟೀಸರ್ ಕಟ್ ಮಾಡುವ ಅವಕಾಶ ನೀಡಿದ್ದರು. ಕೆಜಿಎಫ್ ಟೀಸರ್ ಯಾವ ಮಟ್ಟಕ್ಕೆ ಹಿಟ್ ಆಗಿತ್ತು ಅನ್ನೋದನ್ನ ಹೇಳಬೇಕಾಗಿಯೇ ಇಲ್ಲ. ಹೀಗಾಗಿ ಸಿನಿಮಾ ಎಡಿಟ್ ಮಾಡುವ ಅವಕಾಶವನ್ನು ಕೂಡ ಉಜ್ವಲ್ಗೆ ಪ್ರಶಾಂತ್ ನೀಲ್ ನೀಡಿದ್ದರು. ಒಟ್ಟಾರೆ ಅದೃಷ್ಟ ಅನ್ನೋದು ಯಾವ ಸಮಯದಲ್ಲಿ, ಯಾವ ರೀತಿ ಬರುತ್ತೆ ಅಂತ ಹೇಳೋಕಾಗೋಲ್ಲ. ಹಾಗೇ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನೋ ಮಾತಿಗೆ ಉಜ್ವಲ್ ಸಾಕ್ಷಿಯಾಗಿದ್ದಾರೆ.
- ಪವಿತ್ರ ಸಚಿನ್