ಕಲಬುರಗಿ ಜಿಲ್ಲೆಯ ಕಡಗಂಚಿ ಗ್ರಾಮದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿರುವ ಲಕ್ಷ್ಮೀ ಮಂದಿರದಲ್ಲಿ ರಾಮನವಮಿ ಆಚರಿಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಲಾಗಿದ್ದು, ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಮಧ್ಯೆ ಗಲಾಟೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ನಮ್ಮ ವಿಶ್ವವಿದ್ಯಾಲಯದ ಆವರಣದಲ್ಲಿರುವ ಲಕ್ಷ್ಮೀ ಮಂದಿರದಲ್ಲಿ ಭಾನುವಾರ ನಾವು ರಾಮನವಮಿ ಆಚರಿಸಿ, ವಿಶೇಷ ಪೂಜೆ ನಡೆಸುತ್ತಿದ್ದೇವು. ಅದನ್ನು ವಿರೋಧಿಸಿದ ಎಡಪಂಥೀಯ ವಿಚಾರಧಾರೆಯ ನಾಲ್ವರು ವಿದ್ಯಾರ್ಥಿಗಳು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕಲಬುರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ವಿದ್ಯಾರ್ಥಿ ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ರಾಮನವಮಿ ಆಚರಿಸಿದ ಕಾರಣಕ್ಕಾಗಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಿಂದಿನಿಂದಲೂ ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಚಟುವಟಿಕೆಗಳನ್ನು ನಡೆಸದಂತೆ ನಮಗೆ ಬೆದರಿಕೆ ಹಾಕುತ್ತಿದ್ದರು. ನಾವು ನಮ್ಮ ಚಟುವಟಿಕೆಗಳನ್ನು ಮುಂದುವರೆಸಿದ್ದರ ಪರಿಣಾಮವಾಗಿ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದಾರೆ. ಹಲ್ಲೆ ನಡೆಸಿದ ನಾಲ್ವರ ಪೈಕಿ ಆಂಧ್ರಪ್ರದೇಶದ ಸಾಧಿಕ್ ಎಂಬಾತ ಎಂಬಿಎ ಓದುತ್ತಿದ್ದು, ರಾಹುಲ್ ಎಂಬಾತ ಪಿಎಚ್ಡಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾನೆ. ಈ ನಾಲ್ವರನ್ನು ವಿಶ್ವವಿದ್ಯಾಲಯದಿಂದ ವಜಾ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಈ ಗಲಾಟೆ ಸಂಬಂಧ ನರೋಣಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ. ತಪ್ಪಿಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಲಬುರಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಇಶಾ ಪಂತ್ ಹೇಳಿದ್ದಾರೆ. ಇನ್ನು ವಿಶ್ವವಿದ್ಯಾಲಯವೂ ಕೂಡಾ ಈ ಸಂಬಂಧ ತನಿಖೆ ನಡೆಸುತ್ತಿದೆ. ತನಿಖಾ ವರದಿ ಬಂದ ನಂತರ ತಪ್ಪಿತಸ್ಥ ವಿದ್ಯಾರ್ಥಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಕುಲಪತಿ ಪ್ರೊ. ಸತ್ಯನಾರಾಯಣ್ ಹೇಳಿದ್ದಾರೆ.