ಉ.ಪ್ರದೇಶ ವಿಧಾನಸಭೆ ಪ್ರವೇಶಿಸಿದ 36 ಮುಸ್ಲಿಂ ಶಾಸಕರು!

Uttarpradesh

ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ಕೆಲ ಆಸಕ್ತಿಕರ ಸಂಗತಿಗಳು ಬೆಳಕಿಗೆ ಬರುತ್ತಿವೆ. ಹಿಂದುತ್ವವಾದಿ ನಿಲುವು ಹೊಂದಿರುವ ಬಿಜೆಪಿ ಉತ್ತರಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ಅಧಿಕಾರಕ್ಕೇರಿದೆ. ಈ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಮುಸ್ಲಿಂ ಅಭ್ಯರ್ಥಿಗಳಿಗೆ ವಿಧಾನಸಭಾ ಚುನಾವಣೆಯ ಟಿಕೆಟ್ ನೀಡಿರಲಿಲ್ಲ. ಈ ಹಿಂದಿನಿಂದಲೂ ಬಿಜೆಪಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದು ಅನುಮಾನ. ರಾಜಕೀಯವಾಗಿ ಅದಕ್ಕೆ ಅನೇಕ ಕಾರಣಗಳಿವೆ. ಕಾಂಗ್ರೆಸ್ ಅಥವಾ ಇತರ ಪ್ರಾದೇಶಿಕ ಪಕ್ಷಗಳು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದರಿಂದ ನಾವು ಅವರಿಗೆ ಟಿಕೆಟ್ ನೀಡಿದ್ರೆ ಗೆಲ್ಲುವ ಸಾಧ್ಯತೆ ಕಡಿಮೆ ಎಂಬುದು ಬಿಜೆಪಿ ನಾಯಕರ ಸ್ಪಷ್ಟನೆ.

ಇನ್ನು ಈ ಬಾರಿಯ ಪಂಚರಾಜ್ಯಗಳ ಚುನಾವಣೆಯಲ್ಲಿಯೂ ಬಿಜೆಪಿ ಯಾವುದೇ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿರಲಿಲ್ಲ. ಬಿಜೆಪಿಯ ಈ ನಿಲುವನ್ನೇ ಬಳಸಿಕೊಳ್ಳಲು ಮುಂದಾದ ವಿರೋಧ ಪಕ್ಷಗಳು ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದಾರೆ. ಈ ಬಾರಿಯ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 36 ಮುಸ್ಲಿಂ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದಾರೆ. ಮಾಯಾವತಿ ನೇತೃತ್ವದ ಬಿಎಸ್ಪಿ ಮತ್ತು ಓವೈಸಿ ನೇತೃತ್ವದ ಎಐಎಂಐಎಂ ಮತ್ತು ಅಖಿಲೇಶ್ ನೇತೃತ್ವದ ಸಮಾಜವಾದಿ ಪಕ್ಷಗಳು 403 ವಿಧಾನಸಭಾ ಕ್ಷೇತ್ರಗಳ ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಿದ್ದರು.

ಇದೆಲ್ಲದರ ಪರಿಣಾಮ ಈ ಬಾರಿಯ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗಿದ್ದಾರೆ. 2017ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ 24 ಮುಸ್ಲಿಂ ಶಾಸಕರಿದ್ದರು. 19% ಮುಸ್ಲಿಂ ಜನಸಂಖ್ಯೆ ಹೊಂದಿರುವ ಉತ್ತರಪ್ರದೇಶದಲ್ಲಿ 403 ಸ್ಥಾನಗಳಲ್ಲಿ ಹೊಸದಾಗಿ ಚುನಾಯಿತರಾದವರು 8.93% ರಷ್ಟಿದ್ದಾರೆ. ಉ.ಪ್ರದೇಶದ ಪ್ರಮುಖ ಮುಸ್ಲಿಂ ನಾಯಕರಾದ ಅಝಂ ಖಾನ್, ಅವರ ಪುತ್ರ ಅಬ್ದುಲ್ಲಾ ಅಝಂ ಖಾನ್, ಮುಖ್ತಾರ್ ಅನ್ಸಾರಿ ಪುತ್ರ ಅಬ್ಬಾಸ್ ಮತ್ತು ಸೋದರಳಿಯ ಶುಹೈನ್ ಈ ಬಾರಿಯೂ ಗೆದ್ದು ಬಿಗಿದ್ದಾರೆ.

Exit mobile version